ಮೀರಾ ಕುಮಾರ್ ನಾಮಪತ್ರಕ್ಕೆ ಸೂಚಕರಾಗಿ ಸಿಎಂ ಸಿದ್ದರಾಮಯ್ಯ ಸಹಿ
ಬೆಂಗಳೂರು, ಜೂ.25: ರಾಷ್ಟ್ರಪತಿ ಚುನಾವಣೆಗೆ ಯುಪಿಎ ಅಭ್ಯರ್ಥಿಯಾಗ ಕಣಕ್ಕಿಳಿಯುತ್ತಿರುವ ಮೀರಾಕುಮಾರ್ ನಾಮಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಕರಾಗಿ ಸಹಿ ಹಾಕಿದರು.
ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಮೀರಾಕುಮಾರ್ ಆಯ್ಕೆಯಾಗಿದ್ದು ನಾಮಪತ್ರ ಸಲ್ಲಿಸುವ ಪ್ರಕ್ರಿಯೆಗೆ ಕಾಂಗ್ರೆಸ್ ಚಾಲನೆ ನೀಡಿದೆ. ಈ ಹಿನ್ನಲೆಯಲ್ಲಿ ನಾಮಪತ್ರಕ್ಕೆ ಸೂಚಕರು ಹಾಗೂ ಅನುಮೋದಕರಿಂದ ಸಹಿ ಪಡೆಯುತ್ತಿದೆ.
ಅದರ ಭಾಗವಾಗಿ ಕೆಪಿಸಿಸಿ ಕಚೇರಿ ತಲುಪಿದ್ದ ನಾಮಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಕರಾಗಿ ಸಹಿ ಹಾಕಿದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಮ್ಮುಖದಲ್ಲಿ ಸಿಎಂ ಸಹಿ ಹಾಕಿದರು.
ರಾಷ್ಟ್ರಪತಿ ಚುನಾವಣೆಗೆ ಆಡಳಿತಾರೂಢ ಎನ್.ಡಿ.ಎ ಅಭ್ಯರ್ಥಿಯಾಗಿ ರಾಮನಾಥ್ ಕೋವಿಂದ್ ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳಿ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಿದ್ದರು. ಆದರೆ ಯುಪಿಎ ಅಭ್ಯರ್ಥಿ ನಾಮಪತ್ರಕ್ಕೆ ಸಹಿ ಹಾಕಲು ಸಿಎಂ ದೆಹಲಿಗೆ ತೆರಳಲಿಲ್ಲ, ಬದಲಾಗಿ ನಾಮಪತ್ರವೇ ಕೆಪಿಸಿಸಿ ಕಚೇರಿಗೆ ಬಂದಿದ್ದು ವಿಶೇಷವಾಗಿದೆ.
ರಾಷ್ಟ್ರಪತಿ ಚುನಾವಣೆ ಸಂಬಂಧ ಮುಖ್ಯಮಂತ್ರಿಗಳು ಜೂನ್ ೨೮ ರಂದು ದೆಹಲಿಗೆ ತೆರಳುವರು.