ಮಂಡ್ಯ ಜಿಲ್ಲಾದ್ಯಂತ ಈದುಲ್ ಫಿತ್ರ್ ಆಚರಣೆ
ಮಂಡ್ಯ, ಜೂ.26: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಈದುಲ್ ಫಿತ್ರ್ ಅನ್ನು ಸಡಗರ, ಸಂಭ್ರದಿಂದ ಸೋಮವಾರ ಆಚರಿಸಲಾಯಿತು. ಸಾವಿರಾರು ಮುಸ್ಲಿಮರು ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
ನಗರದ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಮಕ್ಕಳೂ ಪಾಲ್ಗೊಂಡು ಭಕ್ತಿಭಾವ ಮೆರೆದರು. ಧರ್ಮಗುರು ಜುಬೇರ್ ಅಹಮದ್ ಉಪದೇಶ ನೀಡಿದರು. ಇದಕ್ಕೂ ಮುನ್ನ ಸಾವಿರಾರು ಮಂದಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಈದ್ಗಾ ಮೈದಾನಕ್ಕೆ ತೆರಳಿದರು.
ಮದ್ದೂರು: ಬೃಹತ್ ಮೆರವಣಿಗೆ ಮೂಲಕ ಪಟ್ಟಣದ ಈದ್ಗಾ ಮೈದಾನಕ್ಕೆ ಆಗಮಿಸಿದ ಮುಸ್ಲಿಂ ಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಡಿ.ಸಿ.ತಮ್ಮಣ್ಣ, ಕೆಸ್ತೂರು, ನಿಡಘಟ್ಟ, ವಿಠಲಪುರ ಹಾಗೂ ಬೆಸಗರಹಳ್ಳಿಯಲ್ಲಿರುವ ಮುಸ್ಲಿಂ ಕಾಲನಿಗಳ ಅಭಿವೃದ್ಧಿಗೆ 2.50 ಕೋಟಿ ರೂ. ಮಂಜೂರಾಗಲಿದೆ ಹಾಗೂ ಪಟ್ಟಣದಲ್ಲಿ ಪ್ರತ್ಯೇಕ ಹಾಸ್ಟೆಲ್ ನಿರ್ಮಿಸಲಾಗುವುದು ಎಂದರು.
ಪಾಂಡವಪುರದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ, ರೈತಸಂಘದ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಪಾಲ್ಗೊಂಡಿದ್ದರು. ನಾಗಮಂಗಲ, ಕೃಷ್ಣರಾಜಪೇಟೆ, ಮಳವಳ್ಳಿ, ಶ್ರೀರಂಗಪಟ್ಟಣ ಸೇರಿದಂತೆ ವಿವಿಧೆಡೆ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಮಾಡಿದರು.