×
Ad

ಕಡೂರು, ಚಿಕ್ಕಮಗಳೂರಿನಲ್ಲಿ ಸಂಭ್ರಮದ ಈದ್

Update: 2017-06-26 19:38 IST

ಕಡೂರು, ಜೂ. 26: ಈದುಲ್ ಫಿತ್ರ್ ಪ್ರಯುಕ್ತ ಪಟ್ಟಣದ ಸುಮಾರು 10 ಮಸೀದಿಗಳಿಂದ ಸ್ಥಳೀಯರು ಮೆರವಣಿಗೆಯಲ್ಲಿ ಮುಖ್ಯ ಮಸೀದಿಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು.
 ನಂತರ ಕೆ.ಎಂ. ರಸ್ತೆಯ ಮೂಲಕ ಎಮ್ಮೆದೊಡ್ಡಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ತಾಲೂಕಿನಾಧ್ಯಂತ ಬರಗಾಲವಿದ್ದು, ಪ್ರಾಣಿ-ಪಕ್ಷಿಗಳಿಗೆ ಜನಜಾನುವಾರುಗಳಿಗೆ ಕುಡಿಯುವ ನೀರು ಬೇಕಿದ್ದು, ದೇವರು ಮಳೆಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.

ಇತ್ತೀಚಿನ ದಿನಗಳಲ್ಲಿ ಅಶಾಂತಿಯ ವಾತಾವರಣ ನಿರ್ಮಾಣಗೊಳ್ಳುತ್ತಿದ್ದು, ಎಲ್ಲರೂ ಶಾಂತಿಯಿಂದ ಬದುಕಬೇಕಿದೆ, ಆ ದೇವರು ಎಲ್ಲರ ಜೀವನದಲ್ಲಿ ನೆಮ್ಮದಿಯನ್ನು ಕರುಣಿಸಲಿ. ದೇಶದಲ್ಲಿ ಸುಖ-ಶಾಂತಿ ನೆಲೆಸುವಂತೆ ಪ್ರಾರ್ಥನೆ ಮಾಡಿದರು.

 ಸಫಾ ಭೈತುಲ್ಲ ಮಾಲ್ ಕಾರ್ಯದರ್ಶಿ ಇಫ್ರಾನ್ ಮಾತನಾಡಿ, ಸಂಸ್ಥೆಗೆ ಜನರಿಂದ ಸುಮಾರು ರೂ.3.50 ಲಕ್ಷ ಹಣ ಸಂಗ್ರಹವಾಗಿದೆ. ಇದರಲ್ಲಿ ಪ್ರತಿ ತಿಂಗಳು 22 ಬಡ ಕುಟುಂಬಗಳಿಗೆ ದವಸ ಧಾನ್ಯ ನೀಡಲಾಗುತ್ತಿದೆ. 50 ಕುಟುಂಬಗಳಿಗೆ ರಮಝಾನ್ ಪ್ಯಾಕೇಜ್ ನೀಡಲಾಗಿದೆ. ಆರೋಗ್ಯ ಶಿಬಿರವನ್ನು ಜಾತ್ಯತೀತವಾಗಿ ನಡೆಸಲಾಗಿದೆ. 12 ಮಂದಿಗೆ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದ್ದು, ಈ ಪೈಕಿ 4 ಮಂದಿ ಹಿಂದೂಗಳಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮದೀನಾ ಮಸೀದಿಯ ಧರ್ಮಗುರುಗಳಾದ ಇಫ್ರಾನ್ ಸಾಬ್. ಮುಪ್ತಿ ಸಾಬ್ ಧರ್ಮ ಭೋದನೆ ನಡೆಸಿದರು. ಪ್ರಾರ್ಥನೆಯಲ್ಲಿ ಮುಖಂಡರಾದ ಎನ್, ಬಷೀರ್‌ಸಾಬ್, ಅಬೀಬುಲ್ಲಾ ಖಾನ್ ಇಸ್ಮಾಯಿಲ್, ಎನ್. ಇಮಾಮ್, ತನ್ವಿರ್ ಆಹಮದ್, ಡಿ.ಕೆ. ಹೈದರ್, ಸಫಾ ಭೈತುಲ್ಲ ಮಾಲ್ ಅಧ್ಯಕ್ಷ ಮೋಹಿದ್ದಿನ್, ಝರೀನಾ ಬೀಬೀ ದರ್ಗಾ ಆಡಳಿತಾಧಿಕಾರಿ ಮೋಹಿದ್ದಿನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News