ವಿದ್ಯುತ್ ತಂತಿ ಸ್ಪರ್ಶಿಸಿ 4 ಕಾಡಾನೆಗಳ ಸಾವು
ಮಡಿಕೇರಿ, ಜೂ.27: ತುಂಡಾದ ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಮರಿಯಾನೆ ಸೇರಿದಂತೆ ನಾಲ್ಕು ಕಾಡಾನೆಗಳು ಸಾವನ್ನಪ್ಪಿರುವ ಘಟನೆ ಸೋಮವಾರ ತಡ ರಾತ್ರಿ ವೀರಾಜಪೇಟೆ ತಾಲೂಕಿನ ಕಣ್ಣಂಗಾಲ ಗ್ರಾಮದ ಯಡೂರಿನಲ್ಲಿ ನಡೆದಿದೆ.
ಯಡೂರಿನ ಬೊಪ್ಪಂಡ ವಿಜು ಗಣಪತಿ ಎಂಬರಿಗೆ ಸೇರಿದ ಕಾಫಿ ತೋಟದಲ್ಲಿ ರಾತ್ರಿ ವೇಳೆ ವಿದ್ಯುತ್ ತಂತಿ ತುಂಡಾಗಿ ಕೆಳಗೆ ಬಿದ್ದಿತ್ತೆನ್ನಲಾಗಿದ್ದು, ಆಹಾರ ಅರಸಿ ನಾಡಿಗೆ ಬಂದ ನಾಲ್ಕು ಹೆಣ್ಣಾನೆಗಳು ವಿದ್ಯುತ್ ತಂತಿಯನ್ನು ಹಾದು ಹೋಗುವ ಸಂದರ್ಭ ವಿದ್ಯುತ್ ಪ್ರವಹಿಸಿದೆ. ಪರಿಣಾಮವಾಗಿ 40, 36, 6 ಹಾಗೂ 3 ವರ್ಷ ಪ್ರಾಯದ ನಾಲ್ಕು ಹೆಣ್ಣಾನೆಗಳು ಸ್ಥಳದಲ್ಲೇ ಸಾವನ್ನಪಿವೆ.
ಮಂಗಳವಾರ ಕಾಫಿ ತೋಟದಲ್ಲಿ ಕೆಲಸ ಮಾಡುವ ಸಂದರ್ಭ ಕಾರ್ಮಿಕರಿಗೆ ವಿಷಯ ತಿಳಿದಿದ್ದು, ಅರಣ್ಯ ಉಪ ವಲಯ ಅರಣ್ಯಾಧಿಕಾರಿ ದೇವಯ್ಯ ಅವರಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಚೆಸ್ಕಾಂ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಇದೇ ಗ್ರಾಮದ ಕಾಫಿ ತೋಟದಲ್ಲಿ ವಿದ್ಯುತ್ ಸ್ಪರ್ಶಿಸಿ ಎರಡು ಕಾಡಾನೆಗಳು ಸಾವನ್ನಪ್ಪಿದ್ದವು. ಇದೀಗ ನಾಲ್ಕು ಕಾಡಾನೆಗಳು ಸಾವನ್ನಪ್ಪಿದ್ದು, ಪರಿಸರ ಹಾಗೂ ವನ್ಯ ಪ್ರೇಮಿಗಳು ವಿಷಾದ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಡಿ.ಎಫ್.ಓ ಮರಿಯಾ ಕೃಷ್ಣ, ಎ.ಸಿ.ಎಫ್ ರೋಶಿನಿ, ಆರ್.ಎಫ್.ಓ ಗೋಪಾಲ, ಉಪ ವಲಯ ಅರಣ್ಯಾಧಿಕಾರಿ ದೇವಯ್ಯ ಸೇರಿದಂತೆ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿದರು.