×
Ad

ಒತ್ತಡ ಮುಕ್ತ ಸಮಾಜದಿಂದ ರಾಷ್ಟ್ರ ಪ್ರಗತಿ: ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯ

Update: 2017-06-28 16:44 IST

ಮಡಿಕೇರಿ, ಜೂ.28: ದೈಹಿಕ ಮತ್ತು ಮಾನಸಿಕ ಆರೋಗ್ಯ ಸಂರಕ್ಷಣೆಯ ಮೂಲಕ ಒತ್ತಡ ಮುಕ್ತವಾದ ಸಮಾಜದ ನಿರ್ಮಾಣದಿಂದ ರಾಷ್ಟ್ರ ಪ್ರಗತಿಯ ಪಥದಲ್ಲಿ ಸಾಗಲು ಸಾಧ್ಯವೆಂದು ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಅಭಿಪ್ರಾಯಪಟ್ಟಿದ್ದಾರೆ.

ನಗರದ ರೋಟರಿ ಸಭಾಂಗಣದಲ್ಲಿ ಪ್ರಜಾಸತ್ಯ ದಿನಪತ್ರಿಕೆ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ನಿಧಿ, ಮಂಗಳೂರು ಅತ್ತಾವರದ ಕೆಎಂಸಿ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಪತ್ರಕರ್ತರಿಗೆ ಹಾಗೂ ಹಿರಿಯ ನಾಗರಿಕರಿಗಾಗಿ ನಡೆದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅತ್ಯಧಿಕ ಮಾನವ ಸಂಪನ್ಮೂಲವನ್ನು ಹೊಂದಿರುವ ಈ ರಾಷ್ಟ್ರ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ದೈಹಿಕ ಮತ್ತು ಮಾನಸಿಕ ಆರೋಗ್ಯದತ್ತ ಹೆಚ್ಚಿನ ಕಾಳಜಿ ವಹಿಸುವ ಮೂಲಕ ಜೀವನೋತ್ಸಾಹವನ್ನು ಕಂಡುಕೊಳ್ಳುವುದು ಅತ್ಯವಶ್ಯ. ಇಡೀ ಜಗತ್ತು ಅತ್ಯಂತ ವೇಗವಾಗಿ ಬದಲಾವಣೆಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ನಮ್ಮ ಸುತ್ತಮುತ್ತಲಿನಲ್ಲಿ ನಡೆಯುವ ವಿದ್ಯಮಾನಗಳನ್ನು ಜನರಿಗೆ ಮುಟ್ಟಿಸುವ ಕಾರ್ಯದಲ್ಲಿ ನಿರತರಾಗಿರುವ ಪತ್ರಕರ್ತರು ಸದಾ ಒತ್ತಡದಲ್ಲಿರುತ್ತಾರೆ. ಇಂತಹ ಒತ್ತಡವನ್ನು ಮೀರಿ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಧ್ಯಾತ್ಮಿಕತೆ ಸಹಕಾರಿಯಾಗಿದೆ. ಇದರ ಮೂಲಕ ಎಂತಹ ಪರಿಸ್ಥಿತಿಯಲ್ಲಿಯೂ ಸ್ಥಿತಪ್ರಜ್ಞತೆಯನ್ನು ಕಾಯ್ದುಕೊಳ್ಳಲು ಸಾಧ್ಯವಿದೆಯೆಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
 

ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ನಿಧಿ ಸಮಿತಿ ಅಧ್ಯಕ್ಷರಾದ ಎಸ್.ಎಂ.ಚಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಜಿಲ್ಲಾ ವರದಿಗಾರರಾದ ಬಿ.ಸಿ.ದಿನೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಿರಣ್ ಮನು ಪ್ರಾರ್ಥಿಸಿ, ಪತ್ರಕರ್ತ ವಿಘ್ನೇಶ್ ಭೂತನಕಾಡು ಸ್ವಾಗತಿಸಿದರು, ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ವಂದಿಸಿದರು.
ಹಿರಿಯ ನಾಗರಿಕರ ವೇದಿಕೆಯ ಪದಾಧಿಕಾರಿ ತಿಮ್ಮಯ್ಯ ಕಾರ್ಯಕ್ರಮ ನಿರೂಪಿಸಿದರು.


ಸಭಾ ಕಾರ್ಯಕ್ರಮದ ನಂತರ ಕೆಎಂಸಿ ಆಸ್ಪತ್ರೆಯ ನೆೇತ್ರ ತಜ್ಞರಾದ ಡಾಸಂಚಿತ, ಇಎನ್‌ಟಿ ತಜ್ಞರಾದ ಡಾಅತುಲ್ಯ, ಮೂಳೆ ಮತ್ತು ಕೀಲು ವಿಭಾಗದ ತಜ್ಞ ವೈದ್ಯರಾದ ಡಾ ಮಿಥುನ್, ಮಕ್ಕಳ ತಜ್ಞ ಡಾ ಮನ್ಸೂರ್, ಫಿಸೀಷಿಯನ್ ಡಾ ಮಾಧವ, ಸ್ತ್ರೀ ರೋಗ ತಜ್ಞರಾದ ಡಾಪೃಥ್ವಿ ಅವರನ್ನು ಒಳಗೊಂಡ ವೈದ್ಯರ ತಂಡ ಆರೋಗ್ಯ ತಪಾಸಣಾ ಕಾರ್ಯ ನಡೆಸಿಕೊಟ್ಟಿತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News