×
Ad

ಮುತಾಲಿಕ್ ಗಡಿಪಾರಿಗೆ ಯುವ ಕಾಂಗ್ರೆಸ್ ಆಗ್ರಹ

Update: 2017-06-28 17:21 IST

ಶಿವಮೊಗ್ಗ, ಜೂ. 28: ಕೋಮು ವೈಷಮ್ಯ ಸೃಷ್ಟಿಸಲು ಯತ್ನಿಸುತ್ತಿರುವ ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್‌ರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಅವರ ನೇತೃತ್ವದ ಶ್ರೀರಾಮ ಸೇನೆ ಸಂಘಟನೆಯನ್ನು ನಿಷೇಧಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ನಗರದ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಹಿಂದೂ - ಮುಸ್ಲಿಂ ಧರ್ಮಗಳ ನಡುವೆ ಸಾಮರಸ್ಯ ಮೂಡಿಸಲು ಉಡುಪಿಯ ಪೇಜಾವರ ಮಠಾಧೀಶರು ಇತ್ತೀಚೆಗೆ ಉಡುಪಿಯ ಶ್ರೀಕೃಷ್ಣ ದೇವಾಲಯದಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟ ನಿಜಕ್ಕೂ ಸ್ವಾಗತಾರ್ಹ, ಮಾದರಿ ಕೆಲಸವಾಗಿದೆ. ಭಾವೈಕ್ಯತೆಗೆ ಹೊಸ ಮುನ್ನುಡಿ ಬರೆದಿದ್ದಾರೆ. ಪ್ರಸ್ತುತ ಕರಾವಳಿ ಪ್ರದೇಶದಲ್ಲಿ ಹೆಚ್ಚುತ್ತಿರುವ ಕೋಮು ವೈಷಮ್ಯ ವಾತಾವರಣ ತಿಳಿಯಾಗಿಸಲು ಈ ರೀತಿಯ ಕೆಲಸಗಳು ಹೆಚ್ಚಿನ ಸಂಖ್ಯೆಯಲ್ಲಾಗಬೇಕಾಗಿದೆ.

ಈ ನಡುವೆ ಸಂಕುಚಿತ ಮನೋಭಾವದ ಪ್ರಮೋದ್ ಮುತಾಲಿಕ್‌ರವರು ಮುಸ್ಲಿಂ ಸಮುದಾಯಕ್ಕೆಇಫ್ತಾರ್ ಕೂಟ ಏರ್ಪಡಿಸಿದ್ದು ಸರಿಯಲ್ಲ. ಗೋ ಹಂತಕರನ್ನು ಮಠದೊಳಗೆ ಬಿಟ್ಟುಕೊಂಡಿದ್ದು ಸರಿಯಲ್ಲ. ಎಂಬಿತ್ಯಾದಿಯಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಪೇಜಾವರ ಶ್ರೀಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ನಿಜಕ್ಕೂ ಖಂಡನೀಯವಾದುದಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿ ಶಾಂತಿನೆಲೆಸುವಂತೆ ಮಾಡಲು, ಹಿಂದೂ - ಮುಸ್ಲಿಂರ ನಡುವೆ ಸೌಹಾರ್ಧತೆ ಹೆಚ್ಚಿಸಲು, ಪೇಜಾವರ ಸ್ವಾಮಿಗಳ ಸೌಹಾರ್ಧ ಕಾರ್ಯಕ್ಕೆ ಮತೀಯ ಬಣ್ಣ ಲೇಪ ಹಚ್ಚುವ ಕೆಲಸವನ್ನು ಮುತಾಲಿಕ್ ನಡೆಸುತ್ತಿದ್ದಾರೆ. ಈ ಮೂಲಕ ಜನರ ಮನಸ್ಸನ್ನು ಕೆಡಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಸಮಾಜದ ಸೌಹಾರ್ದತೆಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ವರ್ತಿಸುತ್ತಿರುವ ಮುತಾಲಿಕ್‌ರನ್ನು ಗಡಿಪಾರು ಮಾಡಬೇಕು. ಅವರ ಸಂಘಟನೆಯನ್ನು ಶಾಶ್ವತವಾಗಿ ನಿಷೇಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಸಿ.ಜಿ.ಮಧುಸೂದನ್, ನಗರಾಧ್ಯಕ್ಷ ಶರತ್, ಗ್ರಾಮಾಂತರ ಅಧ್ಯಕ್ಷ ಗಿರೀಶ್, ವಿನಯ್, ಆರಿಫುಲ್ಲಾ, ಚಂದ್ರಶೇಖರ್, ವಿನೋದ್ ಸೇರಿದಂತೆ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News