ಮಗನಿಂದಲೇ ತಂದೆಯ ಕೊಲೆ
ಚಿಕ್ಕಮಗಳೂರು, ಜೂ. 28: ವ್ಯಕ್ತಿಯೋರ್ವ ತನ್ನ ತಂದೆಯ ತಲೆಗೆ ಇಟ್ಟಿಗೆಯಿಂದ ಜಜ್ಜಿ, ಕಬ್ಬಿಣದ ಕೊಳವೆಯಿಂದ ಗಂಭೀರವಾಗಿ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆನ್ನಲಾದ ಘಟನೆ ಇಲ್ಲಿಗೆ ಸಮೀಪದ ಮೈಲಿಮನೆ ಎಂಬಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಕೃಷ್ಣ (60) ಎಂದು ಗುರುತಿಸಲಾಗಿದೆ.
ಅವರ ಪುತ್ರ ನಾಗರಾಜ್ ಕುಡಿತದ ಮತ್ತಿನಲ್ಲಿ ತಂದೆಯನ್ನು ಕೊಲೆಗೈದಿರುವುದಾಗಿ ದೂರಲಾಗಿದೆ. ತಂದೆ ಮತ್ತು ಮಗನ ನಡುವೆ ಕಳೆದ ರಾತ್ರಿ ಜಗಳವಾಗಿದ್ದು, ಮಗನಿಂದ ತನ್ನ ಪ್ರಾಣ ಉಳಿಸಿಕೊಳ್ಳಲು ತಂದೆ ಸುಮಾರು 50 ಮೀಟರ್ ದೂರದ ವರೆಗೂ ಓಡಿದ್ದರು ಎಂದು ತಿಳಿದುಬಂದಿದೆ. ಆದರೂ ಬಿಡದ ನಾಗರಾಜ್ ತಂದೆಯನ್ನು ಹಿಂಬಾಲಿಸಿಕೊಂಡು ಹೋಗಿ, ಕೈಗೆಸಿಕ್ಕ ಅವರಿಗೆ ಗಂಭೀರವಾಗಿ ಹಲ್ಲೆ ಮಾಡಿ ಹತ್ಯೆ ಮಾಡಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಿಂದ ಗೋಡೆ, ಅಂಗಳವೆಲ್ಲಾ ರಕ್ತಮಯವಾಗಿದೆ.
ಹತ್ಯೆಯನ್ನು ಕಣ್ಣಾರೆ ಕಂಡ ಮೃತ ಕೃಷ್ಣರ ಪತ್ನಿ ಹಾಗೂ ಪಕ್ಕದ ಮನೆಯ ಮಹಿಳೆಯರು ಕೂಗಿಕೊಳ್ಳುತ್ತಿದ್ದಂತೆ ಸ್ಥಳಕ್ಕೆ ಬಂದ ಸ್ಥಳೀಯ ಯುವಕರು ಆರೋಪಿ ನಾಗರಾಜ್‌ನನ್ನು ಕಂಬಕ್ಕೆ ಕಟ್ಟಿಹಾಕಿ ನಂತರ ಮಲ್ಲಂದೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಲ್ಲಂದೂರು ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.