ಸಂಸದರು ಶಾಂತಿ ಕದಡುವ ಹೇಳಿಕೆಗಳನ್ನು ಬಿಟ್ಟು ಸೌಹಾರ್ಧಯುತ ಸಾಮರಸ್ಯ ಜೀವನಕ್ಕೆ ಸಹಕರಿಸಿ: ಬಿ.ಎಂ.ಸಂದೀಪ್
ಚಿಕ್ಕಮಗಳೂರು, ಜೂ.28: ಉಡುಪಿ ಪೇಜಾವರ ಶ್ರೀಗಳ ಇಫ್ತಾರ್ ಕೂಟದ ಬಗ್ಗೆ ಟೀಕೆ ಮಾಡಿ ಪ್ರಚಾರ ಗಿಟ್ಟಿಸಲು ಮುಂದಾಗಿರುವ ಸಂಸದೆ ಶೋಭಾ ಕರಂದ್ಲಾಜೆ ಶಾಂತಿ ಕದಡುವ ಹೇಳಿಕೆಗಳನ್ನು ನೀಡುವುದು ಬಿಟ್ಟು ಸೌಹಾರ್ಧತೆ-ಸಾಮರಸ್ಯದಿಂದ ಜೀವನ ನಡೆಸಲು ಸಹಕಾರಿಯಾಗುವಂತೆ ರಾಜೀವ್‌ಗಾಂಧಿ ಪಂಚಾಯತ್ ರಾಜ್ ಸಂಘಟನೆ ರಾಜ್ಯ ಸಂಚಾಲಕ ಬಿ.ಎಂ.ಸಂದೀಪ್ ಸಲಹೆ ನೀಡಿದ್ದಾರೆ.
ಅವರು ಬುಧವಾರ ಈ ಕುರಿತು ಹೇಳಿಕೆ ನೀಡಿದ್ದು, ಶ್ರೀಕೃಷ್ಣ ಮಠದಲ್ಲಿ ಪೇಜಾವರ ಶ್ರೀಗಳು ನಡೆಸಿದ ಇಫ್ತಾರ್ ಕೂಟ ಕುರಿತು ಶೋಭಾರವರ ಅಪಸ್ವರದ ಹೇಳಿಕೆ ಸಾಮರಸ್ಯದಿಂದ ಬಾಳ್ವೆ ನಡೆಸುತ್ತಿರುವವರ ನಡುವೆ ಸಂಘರ್ಷಕ್ಕೆ ಪ್ರೇರಣೆ ನೀಡಿದಂತಾಗುತ್ತದೆ. ಅಧಿಕಾರಕ್ಕಾಗಿ ಕೋಮು ಭಾವನೆ ಕೆರಳಿಸಿ ರಾಜಕೀಯ ಮಾಡುವುದು ಬಿಜೆಪಿಗೆ ತಲತಲಾಂತರದಿಂದ ಬಂದ ಬಳುವಳಿ ಎಂದು ಟೀಕಿಸಿದ್ದಾರೆ.
ಹಿಂದೂಗಳ ಹಬ್ಬದಲ್ಲಿ ಮುಸಲ್ಮಾನರಿಗೆ ಪಾನಕ ನೀಡುವುದು, ಮುಸಲ್ಮಾನರ ಹಬ್ಬದಲ್ಲಿ ಇಫ್ತಾರ್‌ಕೂಟ ನಡೆಸುತ್ತಾ ಜಾತಿ, ಮತ, ಭೇದ ತೊರೆದು ಪರಸ್ಪರ ಪ್ರೀತಿ ವಿಶ್ವಾದಿಂದ ಜೀವನ ಮಾಡುತ್ತಿರುವುದು ಪ್ರತೀತಿ. ಒಗ್ಗಟ್ಟು ಸಾಮರಸ್ಯವಿದ್ದರೆ ಮಾತ್ರ ದೇಶದ ಸರ್ವತೋಮುಖ ಅಭಿವೃದ್ದಿ ಸಾಧ್ಯ ಇಲ್ಲವಾದರೆ ಸಂಘರ್ಷಕ್ಕೆ ನಾವೆ ಅಡಿಪಾಯ ಹಾಕಿ ಕೊಟ್ಟಂತಾಗುತ್ತದೆ ಎಂಬುದನ್ನು ಮನಗಾಣಬೇಕು. ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹಾಗೂ ಸಂಸದೆ ಶೋಭಾರವರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವರಿಬ್ಬರೂ ಗೋಡ್ಸೆ ಸಂಸ್ಕೃತಿಯಿಂದ ಹೊರ ಬಂದು, ಗಾಂಧಿ ಆತ್ಮ ಚರಿತ್ರೆ ಮತ್ತು ಸಂವಿಧಾನವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಮುಖ್ಯ. ಇವರುಗಳಿಗೆ ಮುಗ್ದಜನರ ಬಾವನೆ ಕೆರಳಿಸಿ, ಜಾತಿಗಳ ನಡುವೆ ವಿಷಬೀಜ ಬಿತ್ತುವುದೇ ಹವ್ಯಾಸ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನಕ್ಕೆ ಹೋಗಿ ನವಾಜ್ ಶರೀಫ್ ರವರ ನಿವಾಸದಲ್ಲಿ ಔತಣ ಕೂಟ ನಡೆಸಿದಾಗ ಮೋದಿ ನಡೆಯನ್ನು ಖಂಡಿಸಬೇಕೆಂದು ಹೊಳೆಯದ ಶೋಭಾರಿಗೆ ಪೇಜಾವರ ಶ್ರೀಗಳ ಇಫ್ತಾರ್‌ಕೂಟವನ್ನು ಖಂಡಿಸಬೇಕು ಎನ್ನಿಸಿದ್ದು ಎರಡು ಕೋಮುಗಳ ನಡುವೆ ವಿಷಬೀಜ ಬಿತ್ತುವ ಹುನ್ನಾರ ಎಂಬುದು ಬಹಿಂರಂಗ ಸತ್ಯ ಎಂದು ಹೇಳಿದ್ದಾರೆ.
ಸಂಸದರಾದಾಗಿನಿಂದ ಕ್ಷೇತ್ರದ ಜನರ ಸಮಸ್ಯೆಯಾಗಲಿ, ಅಭಿವೃದ್ದಿಗಳ ಬಗ್ಗೆಯಾಗಲಿ ಹೇಳಿಕೆ ನೀಡದ ಶೋಭಾ ಜಾತಿ ರಾಜಕಾರಣದ ವಿಷಯದಲ್ಲಿ ತಟ್ಟನೆ ಮೂಗು ತೂರಿಸುವುದನ್ನು ಕಂಡಿರುವ ಜಿಲ್ಲೆಯ ಜನ ತಲೆ ತಗ್ಗಿಸುವಂತಾಗಿದೆ. ಈ ರೀತಿ ಹೇಳಿಕೆ ನೀಡಿ ನೀವು ಪ್ರತಿನಿಧಿಸಿರುವ ಮಲೆನಾಡಿನ ಗೌರವ ಹರಾಜು ಮಾಡುವ ಬದಲು ರೈತರು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿದರೆ ಉತ್ತಮ ಎಂದಿದ್ದಾರೆ.