ಮೌಢ್ಯ ನಿಷೇಧ ಕಾಯ್ದೆ ಕರಡು ಸಿದ್ಧ - ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡನೆ: ಕಾಗೋಡು ತಿಮ್ಮಪ್ಪ

Update: 2017-06-28 14:37 GMT

ಬೆಂಗಳೂರು, ಜೂ.28: ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯ ಕರಡು ಸಿದ್ಧವಾಗಿದ್ದು, ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕವನ್ನು ಮಂಡನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ವೌಢ್ಯ ನಿಷೇಧ ಕಾಯ್ದೆಯ ಸ್ವರೂಪ ಕುರಿತು ವರದಿ ನೀಡಲು ರಚಿಸಲಾಗಿದ್ದ ಸಂಪುಟ ಉಪ ಸಮಿತಿಯ ಅಧ್ಯಕ್ಷ ಹಾಗೂ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೌಢ್ಯ ನಿಷೇಧ ಕಾಯ್ದೆಯ ಕರಡು ಪ್ರತಿಯನ್ನು ಸಿದ್ಧಗೊಳಿಸಿ ಕಾನೂನು ಇಲಾಖೆಯ ಪರಿಶೀಲನೆಗೆ ಕಳುಹಿಸಿಕೊಡಲಾಗಿದೆ. ಕರಡು ವಿಧೇಯಕದಲ್ಲಿ ಮಡೆಸ್ನಾನ, ಜ್ಯೋತಿಷ್ಯ, ಪ್ರಾಣಿಗಳ ಬಲಿ ಸೇರಿದಂತೆ ಇನ್ನಿತರ ಅಮಾನವೀಯ ಪದ್ಧತಿಯನ್ನು ನಿಷೇಧಿಸುವಂತೆ ಶಿಫಾರಸ್ಸು ಮಾಡಲಾಗಿದೆ ಎಂದರು.

ವೌಢ್ಯಗಳನ್ನು ತಡೆಗಟ್ಟುವುದು ಅಷ್ಟು ಸುಲಭದ ಕೆಲಸವಲ್ಲ. ಹಾಗಂತ, ಈ ಕಾಯ್ದೆಯಲ್ಲಿ ಉಗ್ರಸ್ವರೂಪದ ಅಂಶಗಳನ್ನು ಸೇರಿಸಲಾಗಿಲ್ಲ. ಸಮಾಜದಲ್ಲಿ ಯಾವುದೆ ಆಚರಣೆಯನ್ನು ಬಲವಂತವಾಗಿ ನಿಷೇಧಿಸಲು ಸಾಧ್ಯವಿಲ್ಲ. ಆದರೆ, ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಮೂಢನಂಬಿಕೆಗಳನ್ನು ತೊಡೆದು ಹಾಕಬಹುದು ಎಂದು ಅವರು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಊರು ಹಬ್ಬ, ಜಾತ್ರೆ ಸೇರಿದಂತೆ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಕುರಿ, ಕೋಳಿಯನ್ನು ಬಲಿ ನೀಡಲಾಗುತ್ತದೆ. ಇದನ್ನೆಲ್ಲ ನಿಲ್ಲಿಸಿ ಎಂದರೆ ತಕ್ಷಣಕ್ಕೆ ಜನರು ಒಪ್ಪುವುದು ಕಷ್ಟ. ಆದುದರಿಂದ, ಜನರಲ್ಲಿ ಈ ಆಚರಣೆಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪರಿವರ್ತನೆ ಮಾಡಬೇಕಿದೆ. ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಈ ವಿಧೇಯಕವನ್ನು ಮಂಡಿಸಲಾಗುವುದು ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News