×
Ad

ಸಂಸದ ಸಿ.ಎಸ್.ಪುಟ್ಟರಾಜು ಕುಟುಂಬ ಒಡೆತನದ ಕಲ್ಲುಗಣಿಗಾರಿಕೆ ಕಂಪನಿಗೆ 40 ಲಕ್ಷ ರೂ.ದಂಡ

Update: 2017-06-28 21:40 IST

ಮಂಡ್ಯ, ಜೂ.28: ಸಂಸದ ಸಿ.ಎಸ್.ಪುಟ್ಟರಾಜು ಕುಟುಂಬದ ಒಡೆತನದ ಕಂಪನಿಗೆ ಅಕ್ರಮ ಕಲ್ಲುಗಣಿಗಾರಿಕೆ ಸಂಬಂಧ 40,68,828 ರೂ.ಗಳ ದಂಡವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ವಿಧಿಸಿದ್ದಾರೆ.

ಸಿ.ಎಸ್.ಪುಟ್ಟರಾಜು ಸಹೋದರ ಚಿಕ್ಕರಾಮೇಗೌಡರ ಪುತ್ರರಾದ ಸಿ.ಎಸ್.ಅಶೋಕ್ ಮತ್ತು ಸಿ.ಎಸ್.ಶಿವಕುಮಾರ್ ಅವರ ಒಡೆತನದ ಎಸ್.ಟಿ.ಜಿ.ಅಸೋಷಿಯೇಟ್ಸ್ ಕಲ್ಲುಗಣಿಗಾರಿಕೆ ಕಂಪನಿಗೆ ಈ ದಂಡ ವಿಧಿಸಲಾಗಿದೆ.

ಸದರಿ ಕಂಪನಿಗೆ ಸಿ.ಎಸ್.ಪುಟ್ಟರಾಜು ಅವರೂ ಪಾಲುದಾರರಾಗಿದ್ದಾರೆನ್ನಲಾಗಿದ್ದು, ಕಳೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ತಮ್ಮ ಆಸ್ತಿ, ಆದಾಯ ಘೋಷಣಾ ಪತ್ರದಲ್ಲಿ ಪುಟ್ಟರಾಜು ಅವರು, ಎಸ್.ಟಿ.ಜಿ.ಸ್ಟೋನ್ಸ್ ಕ್ರಷರ್‌ನಲ್ಲಿ 19,87,711 ರೂ. ಬಂಡವಾಳ ಹೂಡಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಪಾಂಡವಪುರ ತಾಲೂಕು ಚಿನಕುರಳಿ ಗ್ರಾಮದ ಸ.ನಂ.80 ಮತ್ತು ಅಮೃತ್‌ಕಾವಲು ಸ.ನಂ.01(ಬೇಬಿಬೆಟ್ಟ)ರಲ್ಲಿ ಸಿ.ಎಸ್.ಅಶೋಕ್, ಶಿವಕುಮಾರ್ ಅನಧಿಕೃತವಾಗಿ ಕಲ್ಲುಗಣಿಗಾರಿಕೆ ನಡೆಸಿರುವುದು ಸಾಬೀತಾಗಿದೆ ಎಂದು ದಂಡ ವಿಧಿಸಿರುವ ಹಿರಿಯ ಭೂ ವಿಜ್ಞಾನಿ ಹೇಳಿದ್ದಾರೆ.
ಬೇಬಿಬೆಟ್ಟ ಸುತ್ತಮುತ್ತ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಹಾಗೂ ತೆಗೆದುಕೊಂಡಿರುವ ಕಾನೂನು ಕ್ರಮ ಕುರಿತು ಮಾಹಿತಿ ನೀಡುವಂತೆ ಆರ್‌ಟಿಐ ಕಾರ್ಯಕರ್ತ ಕೆ.ಆರ್.ರವೀಂದ್ರ ಅವರು ಮಾಹಿತಿ ಹಕ್ಕು ಅಧಿನಿಯಮದಡಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಸಿದ್ದು, ಸದರಿ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸುತ್ತಿರುವವರಿಗೆ 90,80,666 ರೂ. ದಂಡ ವಿಧಿಸಿರುವ ಮಾಹಿತಿಯನ್ನು ಹಿರಿಯ ಭೂ ವಿಜ್ಞಾನಿ ರವೀಂದ್ರ ಅವರಿಗೆ ನೀಡಿದ್ದಾರೆ.

ಎಸ್.ಜಿ.ಟಿ.ಅಸೋಷಿಯೇಟ್ಸ್ ಕಂಪನಿ ಮಾಲಕರಾದ ಸಿ.ಎಸ್.ಅಶೋಕ್, ಸಿ.ಎಸ್.ಶಿವಕುಮಾರ್ ಅವರು, ಪರವಾನಗಿ ಇಲ್ಲದೆ, ಅನಧಿಕೃತವಾಗಿ ಕಲ್ಲುಗಣಿಗಾರಿಕೆ ನಡೆಸಿ ಸುಮಾರು 3,900 ಮೆಟ್ರಿಕ್ ಟನ್‌ಗಳಷ್ಟು ಕಲ್ಲನ್ನು ಸಾಗಾಣೆ ಮಾಡಿರುವುದು ಪರಿಶೀಲನೆ ವೇಳೆ ದೃಢಪಟ್ಟಿದೆ ಎಂದು ಮಾಲಕರಿಗೆ ನೀಡಿರುವ ನೊಟೀಸ್‌ನಲ್ಲಿ ಹಿರಿಯ ಭೂ ವಿಜ್ಞಾನಿ ಮಾಹಿತಿ ನೀಡಿದ್ದಾರೆ.

ಕರ್ನಾಟಕ ಉಪಖನಿಜ ರಿಯಾಯತಿ ನಿಯಮ 1994ರ 44(3)ರ ಉಲ್ಲಂಘನೆಯಾಗಿದ್ದು, ಪ್ರತಿ ಟನ್‌ಗೆ 60 ರೂ.ನಂತೆ ರಾಜಧನದ 15ಪಟ್ಟು ದಂಡವನ್ನು ಕಂಪನಿ ಮಾಲಕರಿಗೆ ವಿಧಿಸಲಾಗಿದ್ದು, ಸದರಿ ಮೊತ್ತವನ್ನು ನಿಗದಿತ ದಿನದೊಳಗೆ ಪಾವತಿಸಲು ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಭೂ ವಿಜ್ಞಾನಿಗಳು ನೊಟೀಸ್‌ನಲ್ಲಿ ಎಚ್ಚರಿಸಿದ್ದಾರೆ.

ಸಂಸದ ಸಿ.ಎಸ್.ಪುಟ್ಟರಾಜು ಕುಟುಂಬ ಪಾಂಡವಪುರ ತಾಲೂಕಿನ ಚಿನಕುರಳಿ ಮತ್ತು ಪುರಾಣ ಪ್ರಸಿದ್ದ ಬೇಬಿಬೆಟ್ಟದ ಸುತ್ತಮುತ್ತ ಅಕ್ರಮ ಕಲ್ಲುಗಣಿಗಾರಿಕೆ ಕೈಗೊಂಡಿದ್ದು, ಕೋಟ್ಯಂತರ ರೂ.ಗಳನ್ನು ಸರಕಾರಕ್ಕೆ ನಷ್ಟ ಉಂಟುಮಾಡಿರುವುದಲ್ಲದೆ, ಪರಿಸರಕ್ಕೂ ಹಾನಿಮಾಡಿದ್ದಾರೆ ಎಂದು ರೈತಸಂಘ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದದ್ದನ್ನು ಇಲ್ಲಿ ಸ್ಮರಿಸಬಹುದು.
ಅಲ್ಲದೆ, ಅಕ್ರಮ ಕಲ್ಲುಗಣಿಗಾರಿಕೆಯಲ್ಲಿ ಸ್ಫೋಟಕಗಳನ್ನು ಬಳಸುವುದರಿಂದ ಜಿಲ್ಲೆಯ ರೈತರ ಜೀವನಾಡಿ ಕೃಷ್ಣರಾಜಸಾಗರ ಜಲಾಶಯ (ಕೆಆರ್‌ಎಸ್)ಕ್ಕೆ ಅಪಾಯವಿದೆ ಎಂದೂ ಹೇಳಲಾಗಿತ್ತು. ರೈತ ನಾಯಕ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ನೇತೃತ್ವದಲ್ಲೂ ಹಲವು ಬಾರಿ ಈ ಸಂಬಂಧ ಹೋರಾಟ ನಡೆದಿದ್ದರೂ ಪ್ರಯೋಜನವಾಗಿರಲಿಲ್ಲ. ಈ ಸಂಬಂದ ಆರ್‌ಟಿಐ ಕಾರ್ಯಕರ್ತ ಕೆ.ಆರ್.ರವೀಂದ್ರ ಅವರೂ ಕಾನೂನು ಹೋರಾಟ ಮಾಡುತ್ತಿದ್ದಾರೆ.
    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News