ಪೇಜಾವರ ಶ್ರೀಗಳ ಇಫ್ತಾರ್ ಕೂಟಕ್ಕೆ ಪಿ.ಎನ್.ರಾಮಯ್ಯ ಶ್ಲಾಘನೆ
ತುಮಕೂರು, ಜೂ.29: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ರಮಝಾನ್ ಅಂಗವಾಗಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ ಏರ್ಪಡಿಸಿ ಸೌಹಾರ್ಧತೆ ಮೆರೆದಿರುವ ಉಡುಪಿ ಪರ್ಯಾಯ ಪೀಠಾಧ್ಯಕ್ಷ ಪೇಜಾವರ ಶ್ರೀಗಳ ಕಾರ್ಯ ಶ್ಲಾಘನೀಯ ಎಂದು ದಸಂಸ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ತಿಳಿಸಿದ್ದಾರೆ.
ಜಿಲ್ಲಾ ದಲಿತ ಸಂಘರ್ಷ ಸಮಿತಿ ಕಚೇರಿಯಲ್ಲಿ ಆಯೋಜಿಸಿದ್ದ ಕೋಮು ಸೌಹಾರ್ಧತೆ ಮತ್ತು ಜಾತಿ ನಿಮೂರ್ಲನೆ ಕುರಿತ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು, ಪೇಜಾವರ ಶ್ರೀಗಳು ಸಮಾಜದಲ್ಲಿ ಹಿಂದೂ, ಮುಸ್ಲಿಮರು ಏಕತೆ, ಶಾಂತಿ, ಪ್ರೀತಿ ಮತ್ತು ಸೌಹಾರ್ಧತೆಯಿಂದ ಬಾಳುವ ಮೂಲಕ ಕೋಮು ಗಲಬಭೆಗೆ ಅವಕಾಶ ನೀಡದೆ, ಸ್ನೇಹ, ಸಾಮರಸ್ಯ ಮೆರೆಯುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಪೇಜಾವರ ಶ್ರೀಗಳ ರೀತಿ ಇತರೆ ಧರ್ಮ ಮತ್ತು ಜಾತಿಯ ಮಠಗಳ ಸ್ವಾಮೀಜಿಗಳು ಈ ರೀತಿಯ ಕಾರ್ಯಕ್ರಮಗಳನ್ನು ಮಾಡುವ ಮೂಲಕ ನಾಡಿಗೆ ಕೋಮು ಸಾಮರಸ್ಯದ ಸಂದೇಶ ಸಾರಬೇಕೆಂದು ಪಿ.ಎನ್.ರಾಮಯ್ಯ ಒತ್ತಾಯಿಸಿದರು.
ಈ ದೇಶದಲ್ಲಿ ಧರ್ಮದ ಹೆಸರಿನಲ್ಲಿ ಉಗ್ರಗಾಮಿಗಳು ದಿನ ನಿತ್ಯ ಅಮಾಯಕ ಜನರನ್ನು ಕೊಲ್ಲುತ್ತಿದ್ದಾರೆ.ಇವರ ವಿರುದ್ದ ಎಲ್ಲಾ ಧರ್ಮದ ಸ್ವಾಮೀಜಿಗಳು ಉಗ್ರರನ್ನು ಮಟ್ಟ ಹಾಕಲು ವಿಶ್ವಸಂಸ್ಥೆಯ ಮೇಲೆ ಒತ್ತಡ ಹಾಕಬೇಕು. ಅಲ್ಲದೆ, ದೇಶದಲ್ಲಿ ಹೆಚ್ಚಿರುವ ಅಸ್ಪಷ್ಯತೆ, ದಲಿತರಿಗೆ ದೇವಾಲಯ ಪ್ರವೇಶ ನಿರಾಕರಣೆ, ಪ್ರೇಮ ವಿವಾಹಗಳ ಹೆಸರಿನಲ್ಲಿ ನಡೆಯುವ ಮರ್ಯಾದೆ ಹತ್ಯೆ ಇವುಗಳ ವಿರುದ್ದವೂ ವ್ಮಠಾಧೀಶರು ಧ್ವನಿ ಎತ್ತಬೇಕು.ಅಸ್ಪಷ್ಯತೆ ತೊಡೆದು ಹಾಕಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಅರಿವು ಮೂಡಿಸಬೇಕೆಂದು ಪಿ,ಎನ್.ರಾಮಯ್ಯ ಮನವಿ ಮಾಡಿದ್ದಾರೆ.
ಸಮಾರಂಭದಲ್ಲಿ ರಸ್ತೆ ಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಬಾಬಾ, ದಸಂದ ಅಲ್ಪಸಂಖ್ಯಾತ ಘಟಕದ ಅಸ್ಲಾಂ, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಟಿ.ಎನ್.ಮಧು, ಕಾರ್ಮಿಕ ಘಟಕದ ಜಿ.ಆರ್.ಸುರೇಶ್, ದಲಿತ ಸಾಮ್ರಾಜ್ಯ ಸೇನೆಯ ಪ್ರಧಾನ ಕಾರ್ಯದರ್ಶಿ ಎ.ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಮಹೇಂದ್ರ ಮತ್ತಿತರರು ಉಪಸ್ಥಿತರಿದ್ದರು.