ರೈತರ ಪೂರ್ಣ ಸಾಲಮನ್ನಕ್ಕೆ ಆಗ್ರಹಿಸಿ ಜು.3 ರಂದು ರಾಜ್ಯ ರೈತ ಸಂಘ ಪ್ರತಿಭಟನೆ: ಕೊಟ್ಟೂರು ಶ್ರೀನಿವಾಸ್

Update: 2017-06-29 12:06 GMT

ಹಾಸನ, ಜೂ.29: ರೈತರು ಮಾಡಿದ ಎಲ್ಲಾ ಸಾಲವನ್ನು ಕೂಡಲೇ ಮನ್ನಾ ಮಾಡುವಂತೆ ಆಗ್ರಹಿಸಿ ಜುಲೈ 3 ರಂದು ರಾಜ್ಯ ರೈತ ಸಂಘದಿಂದ ಪ್ರತಿಭಟನೆ ಮಾಡುವುದಾಗಿ ಸಂಘದ ಜಿಲ್ಲಾಧ್ಯಕ್ಷ ಕೊಟ್ಟೂರು ಶ್ರೀನಿವಾಸ್ ತಿಳಿಸಿದರು.
      
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ರೈತರು ಸಹಕಾರ ಸಂಘಗಳಲ್ಲಿ ಪಡೆದಿರುವ ಎಲ್ಲಾ ಸಾಲಗಳನ್ನು ಮನ್ನಾ ಮಾಡಬೇಕು. ಜೊತೆಗೆ ಕೇಂದ್ರ ಸರಕಾರವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡಿರುವ ಸಂಪೂರ್ಣ ಸಾಲವನ್ನು ಮನ್ನಾ ಮಾಡುವಂತೆ ಒತ್ತಾಯಿಸಿದರು.

ರಾಜ್ಯ ಸರಕಾರ ಇತ್ತಿಚಿಗೆ ರೈತರು ಮಾಡಿದ ಸಹಕಾರ ಬ್ಯಾಂಕುಗಳ 50 ಸಾವಿರ ರೂ.ಗಳ ಸಾಲಮನ್ನಾ ಮಾಡಿರುವುದು ಸ್ವಾಗತಾರ್ಹ, ಉಳಿದ ಸಾಲವನ್ನು ಪೂರ್ಣವಾಗಿ ಮನ್ನಾ ಮಾಡಬೇಕು. ಹಿಂಗಾರಿ ಮತ್ತು ಮುಂಗಾರಿ ಬೆಳೆಗಳು ನಷ್ಟವಾಗಿದ್ದು, ರೈತರು ಮುಂದಿನ ಬೆಳೆ ಬೆಳೆಯಲು ಅನುಕೂಲವಾಗುವಂತೆ ಈ ಸಾಲಿಗೆ ಹೊಸಸಾಲವನ್ನು ಕೊಡುವ ವ್ಯವಸ್ಥೆ ಮಾಡಲಿ. ಕೇಂದ್ರ ಸರಕಾರದ ಅವಿವೇಕಿ ಸಚಿವ ವೆಂಕಯ್ಯನಾಯ್ಡು ಮತ್ತು ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣ್ಯ ಹಾಗೂ ರಿಸರ್ವ್ ಬ್ಯಾಂಕ್ ಗವರ್ನರ್ ಉರ್ಜಿತ್ ಪಟೇಲ್ ನಬಾರ್ಡ್ ಸಂಸ್ಥೆ ಇವರು ರೈತರ ಬಗ್ಗೆ ಬೇಜವಬ್ದಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದರು. ಕೂಡಲೇ ಹೇಳಿಕೆಯನ್ನು ವಾಪಾಸ್ ಪಡೆಯುವಂತೆ ಆಗ್ರಹಿಸಿದರು.

ರಾಜ್ಯದ ಕೃಷಿ ವಲಯ ಅತ್ಯಂತ ಬಿಕ್ಕಟ್ಟಿನಲ್ಲಿ ಇದ್ದು, ಸತತ ಬರಗಾಲ ಮತ್ತು ಹವಮಾನ ವೈಪರೀತ್ಯದಿಂದ ರಾಜ್ಯದ ಹಲವೆಡೆ ಅತಿವೃಷ್ಠಿ ಕಂಡುಬಂದಿದೆ. ಕೈಗೆ ಸಿಕ್ಕ ಅಲ್ಪ ಬೆಳೆಗೆ ನ್ಯಾಯಯುತ ಬೆಲೆ ಸಿಗದೆ ಕಂಗಲಾಗಿದ್ದಾನೆ. ಇದಕ್ಕೆ ವೈಜ್ಞಾನಿಕ ಪರಿಹಾರ ನೀಡವಬೇಕು. ಎಲ್ಲಾ ಬ್ಯಾಂಕುಗಳು ಬರಗಾಲದ ನೆಪದಲ್ಲಿ ತಮ್ಮ ಕೃಷಿ ಸಾಲಗಳನ್ನು ಎನ್.ಪಿ.ಎ. ಮಾನದಂಡದಿಂದ ಹೊರಗಿಡುವ ಸಲುವಾಗಿಯೇ ಪರಿವರ್ತಿಸಿಕೊಳ್ಳಲಾಗಿದೆ ಹೊರತು ರೈತರ ಅನುಕೂಲಕ್ಕಾಗಿ ಅಲ್ಲ. ತಕ್ಷಣ ಈ ಪದ್ಧತಿಯನ್ನು ಬದಲಾಯಿಸಬೇಕು ಎಂದು ಹೇಳಿದರು.  

ಮುದ್ರಾ ಯೋಜನೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತಂದು ಯುವಕರಿಗೆ ಸ್ವಯಂ ಉದ್ಯೋಗ ಸೃಷ್ಠಿಸಬೇಕು. ಮಹಿಳಾ ಸ್ವ-ಸಹಾಯ ಸಂಘಗಳಿಗೆ ಬಡ್ಡಿ ರಹಿತ ಸಾಲ ಒದಗಿಸಬೇಕು. ಪ್ರತಿಭಟನೆ ವೇಳೆ ಜಿಲ್ಲೆಯ ಲೀಡ್ ಬ್ಯಾಂಕಿನ ಮುಖ್ಯಸ್ಥರು ಕಡ್ಡಾಯವಾಗಿ ಸ್ಥಳಕ್ಕೆ ಬರಬೇಕು. ಇಲ್ಲವಾದರೇ ಬ್ಯಾಂಕಿಗೆ ತಕ್ಷಣ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ, ಜಿಲ್ಲಾ ಉಪಾಧ್ಯಕ್ಷ ರುದ್ರೇಶ್‌ಗೌಡ, ತಾಲೂಕು ಅಧ್ಯಕ್ಷ ಲಕ್ಷ್ಮಣ್, ವಸಂತಕುಮಾರ್, ಯು.ಬಿ. ಮೂರ್ತಿ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News