ಮದ್ಯದಂಗಡಿ ತೆರೆಯಲು ಅನುಮತಿ ನೀಡದಂತೆ ಒತ್ತಾಯಿಸಿ ಮನವಿ
ಹಾಸನ, ಜೂ.29: ಕೆಂಪೇಗೌಡ ರಸ್ತೆಯಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡದಂತೆ ಒತ್ತಾಯಿಸಿ ಹಜರತ್ ಸೈಯದ್ ನಿಜಾಮುದ್ದಿನ್ ಷಾ ಖಾದರಿ ವಲಿಯಲ್ಲಾಹ್ ದರ್ಗಾ ಕಮಿಟಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಮದ್ಯದಂಗಡಿ ತೆರವುಗೊಳಿಸಲು ಆದೇಶ ಇರುವುದರಿಂದ ಬೇಲೂರಿನಲ್ಲಿರುವ ಕೆಲ ಮದ್ಯದಂಗಡಿ ಮಾಲೀಕರು ಹಾಲಿ ಇರುವುದನ್ನು ಬೇಲೂರಿನ ಕೆಂಪೇಗೌಡ ರಸ್ತೆಗೆ ಸ್ಥಳಾಂತರಿಸಲು ಮುಂದಾಗಿದ್ದಾರೆ. ಈ ರಸ್ತೆಯಲ್ಲಿ ದರ್ಗಾ ಇರುವುದರಿಂದ ಇಲ್ಲಿ ಸಾವಿರಾರು ಜನರು ದಿನನಿತ್ಯ ಓಡಾಡುತ್ತಾರೆ ಮತ್ತು ಬಾಲಕೀಯರ ಕಾಲೇಜು, ಹಾಸ್ಟೇಲ್ ಹಾಗೂ ಮುಜರಾಯಿ ಇಲಾಖೆಗೆ ಸೇರಿದ ಪಾತಾಳೇಶ್ವರ ದೇವಾಲಯ ಹಾಗೂ ಮೆಣಸಿನಮ್ಮ ದೇವಾಲಯ ಮತ್ತು ಅಂಗನವಾಡಿ ಕೇಂದ್ರ ಎಲ್ಲಾ ಈ ಭಾಗದಲ್ಲೇ ಇದ್ದು, ಶಾಲಾ-ಕಾಲೇಜಿಗೆ ಕೆಂಪೇಗೌಡ ರಸ್ತೆಯಲ್ಲಿಯೇ ಓಡಾಡಬೇಕಾಗಿದೆ. ಎಲ್ಲವನ್ನು ಗಣನೆಗೆ ತೆಗೆದುಕೊಂಡು ಮದ್ದಯದಂಗಡಿ ತೆರೆಯಲು ಅವಕಾಶ ಕೊಡಬಾರದೆಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಪಾತಾಳೇಶ್ವರ ದೇವಾಲಯದ ಸಮಿತಿಯ ಅಧ್ಯಕ್ಷ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಹೆಚ್.ಎಂ. ದಯಾನಂದ್, ರಮೇಶ್, ದಿನೇಶ್, ಜಗದೀಶ್, ಉಮೇಶ್ ಯಲ್ಲೇಶ್, ದೇವರಾಜ್, ರಾಜು, ವೆಂಕಟೇಗೌಡ, ಯೂಸಫ್, ಜವರಯ್ಯ, ಮಹಮದ್ ಆಸೀಫ್, ಇಸ್ಮಾಯಿಲ್, ಆರೀಫ್, ಆದಿಲ್, ತ್ಯಾಸೀನ್ ಸೇರಿದಂತೆ ಇತರರು ಇದ್ದರು.