×
Ad

ನಮ್ಮ ರಸ್ತೆ ನಮ್ಮ ಗ್ರಾಮ ಯೋಜನೆಯ ವಿಳಂಬಕ್ಕೆ ಸರಕಾರವೇ ಕಾರಣ: ವೈಎಸ್‌ವಿ ದತ್ತ

Update: 2017-06-29 18:02 IST

ಕಡೂರು, ಜೂ.29: ನಮ್ಮ ರಸ್ತೆ ನಮ್ಮ ಗ್ರಾಮ ಯೋಜನೆಯ ವಿಳಂಬಕ್ಕೆ ಸರಕಾರವೇ ಕಾರಣ. ಸರಕಾರದ ಗೊಂದಲದಿಂದ ರಸ್ತೆ ಅಭಿವೃದ್ದಿಗೆ ಕುಂಠಿತವಾಗಿದ್ದು, ಯೋಜನೆಯ ಅನುಷ್ಟಾನ ವಿಳಂಬವಾಗಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ಆರೋಪಿಸಿದರು.

ಅವರು ಗುರುವಾರ ತಾಲೂಕಿನ ಗುಡ್ಡೇಹಳ್ಳಿ ಗ್ರಾಮದಲ್ಲಿ ರೂ. 2.92 ಕೋಟಿ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ನಮ್ಮ ರಸ್ತೆ, ನಮ್ಮ ಗ್ರಾಮ ಈ ಯೋಜನೆಯನ್ನು ಗಾಂಧಿ ಗ್ರಾಮ ಗಾಂಧಿ ಪಥ ಎಂದು ಹೆಸರು ಬದಲಾವಣೆ ಮಾಡಿ, ಜಪಾನ್‌ನಿಂದ ಸಾಲ ತಂದು ಜೈಕಾ ಯೋಜನೆಯಡಿ ರಸ್ತೆಗಳನ್ನು ಅಭಿವೃದ್ದಿ ಪಡಿಸುವುದಾಗಿ ಸರ್ಕಾರ ಹೇಳಿತ್ತು. ಆದರೆ ರಾಜ್ಯ ಸರ್ಕಾರದ ಜಪಾನಿನ ಸಾಲವೂ ಇಲ್ಲ, ಜೈಕಾ ಯೋಜನೆಯ ರಸ್ತೆ ಅಭಿವೃದ್ದಿಯೂ ಇಲ್ಲದಂತಾಯಿತು ಎಂದು ಹೇಳಿದರು.

ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಡಿ ಕ್ಷೇತ್ರಕ್ಕೆ ರೂ. 19 ಕೋಟಿ ಅನುದಾನ ಮಂಜೂರಾಗಿದೆ. ಈ ಯೋಜನೆಯಲ್ಲಿ ರೂ. 2 ಕೋಟಿ 82 ಲಕ್ಷ ವೆಚ್ಚದಲ್ಲಿ ಯಗಟಿ ಬಳಿಯ ಚೆನ್ನಕೇಶವ ಸಾಮಿಲ್‌ನಿಂದ ಹನುಮನಹಳ್ಳಿ-ಗುಡ್ಡೇಹಳ್ಳಿ ಗ್ರಾಮದ ಕಂಚಿಹಳ್ಳಿದವರೆಗೆ 3.50 ಕಿ.ಮೀ ಉದ್ದದ ರಸ್ತೆ ಮತ್ತು ರೂ. 10 ಲಕ್ಷ ವೆಚ್ಚದಲ್ಲಿ ಗ್ರಾಮದ ಕೆಂಚರಾಯ ದೇವಸ್ಥಾನದವರೆಗಿನ ಕಾಂಕ್ರಿಟ್ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

ತಾಲೂಕಿನಲ್ಲಿ ಸತತ 4 ವರ್ಷದಿಂದ ಬರಗಾಲಕ್ಕೆ ರೈತಾಪಿ ವರ್ಗ ಕಂಗಲಾಗಿದ್ದು, ರೈತರಲ್ಲಿ ಆತ್ಮಸ್ಥೆರ್ಯ ತುಂಬುವ ಉದ್ದೇಶದಿಂದ ಪಾದಯಾತ್ರೆ ಮಾಡುತ್ತಿದ್ದೇವೆ. ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷರು ಪಾದಯಾತ್ರೆಯನ್ನು ಚುನಾವಣೆ ಗಿಮಿಕ್ ಎಂದು ಹೇಳುತ್ತಾರೆ. ಕ್ಷೇತ್ರಕ್ಕೆ ಹೊಸ ಯೋಜನೆಯನ್ನು ತಂದಿಲ್ಲ. ಕ್ಷೇತ್ರದ ಅಭಿವೃದ್ದಿಗೆ ಏನು ಮಾಡಿಲ್ಲ ಎಂದು ಟೀಕೆ ಮಾಡಿದ್ದಾರೆ ಎಂದು ತಿಳಿಸಿದರು.

ಆದರೆ ಕ್ಷೇತ್ರಕ್ಕೆ 100 ಕೋಟಿ ರೂ. ವೆಚ್ಚದಲ್ಲಿ ಸೋಲಾರ್ ಪಾರ್ಕ್ ಮಂಜೂರು ಮಾಡಿಸಿದ್ದೇನೆ. ಇನ್ನೂ ನಾಲ್ಕು ವರ್ಷದಲ್ಲಿ ಏನು ಸಾಧನೆ ಮಾಡಿದ್ದೇನೆ ಎಂದು ಜನತೆಯೇ ಉತ್ತರ ನೀಡಲಿದ್ದಾರೆ ಎಂದು ತಿರುಗೇಟು ನೀಡಿದರು.

ಈ ಹಿಂದೆ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ ತಾವು ಕಡೂರು ವಿಧಾನಸಭಾ ಕ್ಷೇತ್ರಕ್ಕೆ ಹಲವು ಅಭಿವೃದ್ದಿ ಯೋಜನೆಗಳಿಗೆ ಹಣ ತಂದಿದ್ದೇನೆ, ನಮ್ಮ ಸರ್ಕಾರ ಇದ್ದ ಕಾರಣಕ್ಕೆ ರೂ. 15 ಕೋಟಿಗೂ ಹೆಚ್ಚು ಹಣ ಮಂಜೂರು ಮಾಡಿಸಿದ್ದೇ, ಪ್ರಸ್ತುತ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ, ತಾವು ತಂದ ರೀತಿಯಲ್ಲೇ ಕಾಂಗ್ರೆಸ್ ಮುಖಂಡರು ಹಣವನ್ನು ತರಲಿ ಆಗ ನಾವುಗಳೇ ಜನರಿಂದ ಹೂವಿನ ಮಾಲೆ ಹಾಕಿಸುವುದಾಗಿ  ಗೇಲಿ ಮಾಡಿದರು.

ಜೆಡಿಎಸ್ ಮುಖಂಡರಾದ ವೈ.ಎಸ್. ರವಿಪ್ರಕಾಶ್, ಕೋಡಿಹಳ್ಳಿ ಮಹೇಶ್, ಭಂಡಾರಿಶ್ರೀನಿವಾಶ್, ಚೌಡಪ್ಪ, ಎಂ. ರಾಜಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಇಂದ್ರಮ್ಮ, ಶಂಕರಮ್ಮ, ತಮ್ಮಯ್ಯ, ಕೆಂಚಪ್ಪ, ಪಿಎಂಜಿಎಸ್‌ವೈ. ಅಭಿಯಂತರ ಹರೀಶ್, ಗುತ್ತಿಗೆದಾರ ರವಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News