ಕೊಲೆ ಪ್ರಕರಣ: ಪತ್ನಿ ಸಹಿತ ಮೂವರು ಆರೋಪಿಗಳ ಸೆರೆ
ದಾವಣಗೆರೆ, ಜೂ. 29: ಆಸ್ತಿಗಾಗಿ ತನ್ನ ಮಕ್ಕಳೊಂದಿಗೆ ಸೇರಿಕೊಂಡು ಗಂಡನನ್ನೇ ಕೊಲೆಗೈದಿದ್ದ ಘಟನೆಗೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಭೀಮಾ ಶಂಕರ ಎಸ್. ಗುಳೇದ, ಚನ್ನಗಿರಿ ತಾಲೂಕಿನ ಸಾರಥಿ ಹೊಸೂರು ಗ್ರಾಮದ ನಿವಾಸಿ ರುದ್ರೇಶಪ್ಪ ಎಂಬವರು ಪತ್ನಿ, ಮಕ್ಕಳಿಂದ ಕೊಲೆಯಾದ ವ್ಯಕ್ತಿ. ಪುತ್ರರಾದ ದೇವರಾಜ ಹಾಗೂ ಪತ್ನಿ ರತ್ನಮ್ಮ ಬಂಧಿತ ಆರೋಪಿಗಳು ಎಂದು ತಿಳಿಸಿದರು.
ಕೊಲೆಯಾದ ರುದ್ರೇಶಪ್ಪ ತಾನು ಮಾಡಿದ್ದ ಸಾಲವನ್ನು ತೀರಿಸುವ ಸಲುವಾಗಿ ತನ್ನ ತೋಟವನ್ನು ಮಾರಲು ಯತ್ನಿಸಿದ್ದು, ಇದನ್ನು ಅರಿತ ಪತ್ನಿ ಹಾಗೂ ಮಕ್ಕಳು, ತಂದೆ ತೋಟ ಮಾರಿದರೆ ನಾವು ಬೀದಿಗೆ ಬರುತ್ತೇವೆ ಎಂದು ಕೊಂಡು, ತಂದೆಯನ್ನೇ ಕೊಲ್ಲಲು ನಿರ್ಧರಿಸಿ, ಅವರು ಸತ್ತರೆ ಸಾಲ ನೀಡಿದವರು ಸಹ ಏನು ಮಾಡಲು ಆಗುವುದಿಲ್ಲ ಎಂಬ ದುರಾಸೆಯಂತೆ ಪೂರ್ವ ಸಿದ್ಧತೆ ಮಾಡಿಕೊಂಡು 2017ರ ಏಪ್ರೀಲ್ 12ರಂದು ಕೊಲೆ ಮಾಡಿ, ನಂತರ ಯಾರಿಗೂ ತಿಳಿಯದಂತೆ ಬೈಕಿನಲ್ಲಿ ತೋಟಕ್ಕೆ ತೆಗೆದುಕೊಂಡು ಹೋಗಿರುವುದು ತನಿಖೆಯಿಂದ ದೃಢಪಟ್ಟಿದೆ ಎಂದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಚನ್ನಗಿರಿ ಪೊಲೀಸರು ಆರೋಪಿಗಳ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣವನ್ನು ಭೇದಿಸಲು ಪೊಲೀಸ್ ಅಧೀಕ್ಷಕ ಡಾ. ಭೀಮಾಶಂಕರ ಎಸ್. ಗುಳೇದ ಮತ್ತು ಎಎಸ್‌ಪಿ ಯಶೋಧಾ ಎಸ್. ವಂಟಗೋಡಿ ಮಾರ್ಗದರ್ಶನದಲ್ಲಿ ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪ್ರಭಾರ ಪೊಲೀಸ್ ಉಪಾಧೀಕ್ಷಕ ಎಂ.ಕೆ. ಗಂಗಲ್ ನೇತೃತ್ವದಲ್ಲಿ ಚನ್ನಗಿರಿ ವೃತ್ತ ನಿರೀಕ್ಷಕ ಆರ್.ಆರ್. ಪಾಟೀಲ್ ಹಾಗೂ ಚನ್ನಗಿರಿ ಪೊಲೀಸ್ ಠಾಣೆಯ ಉಪ ನೀರಿಕ್ಷಕ ವೀರಬಸಪ್ಪ ಎಲ್. ಕುಸಲಾಪುರ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚನೆ ಮಾಡಲಾಗಿತ್ತು ಎಂದರು.