ಬಿಸಿ ನೀರಿನ ಪಾತ್ರೆಗೆ ಬಿದ್ದಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು
ಶಿವಮೊಗ್ಗ, ಜೂ. 30: ಆಟವಾಡುತ್ತಾ ಬಿಸಿ ನೀರಿದ್ದ ಪಾತ್ರೆಗೆ ಬಿದ್ದು ತೀವ್ರ ಸ್ವರೂಪದ ಸುಟ್ಟ ಗಾಯಕ್ಕೆ ತುತ್ತಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಿಲ್ಲೆಯ ಸಾಗರ ತಾಲೂಕಿನ ಆವಿನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿಪ್ಪಡಿ ಗ್ರಾಮದ 2 ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಘಟನೆ ವರದಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿ ಗ್ರಾಮದ ನಂದೀಶ್ ಹಾಗೂ ಮಂಜುಳ ದಂಪತಿಯ ಪುತ್ರ ನಿತೀಶ್ (2) ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ಕಿಪ್ಪಡಿ ಗ್ರಾಮದಲ್ಲಿರುವ ತವರು ಮನೆಗೆ ಮಂಜುಳರವರು ಆಗಮಿಸಿದ್ದ ವೇಳೆ ಈ ದುರಂತ ಸಂಭವಿಸಿದೆ.
ಪಾತ್ರೆಯೊಂದರಲ್ಲಿ ಬಿಸಿ ನೀರು ಕಾಯಿಸಿಟ್ಟಿದ್ದು, ಆಟವಾಡುತ್ತಾ ನಿತೀಶ್ ಪಾತ್ರೆಯೊಳಗೆ ಬಿದ್ದಿದ್ದ. ತೀವ್ರ ಸ್ವರೂಪದ ಸುಟ್ಟ ಗಾಯಕ್ಕೀಡಾಗಿದ್ದ. ತಕ್ಷಣವೇ ಮನೆಯವರು ಸಮೀಪದ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ, ಮಣಿಪಾಲ್, ಮಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಅಸುನೀಗಿದೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣದಡಿ ಕೇಸ್ ದಾಖಲಾಗಿದೆ.