×
Ad

ಗ್ರಾಮೀಣ ಬಡ ರೈತರ 150 ಮಕ್ಕಳಿಗೆ ಉಚಿತ ಇಂಜಿನಿಯರಿಂಗ್ ಶಿಕ್ಷಣ

Update: 2017-06-30 17:46 IST

ತುಮಕೂರು.ಜೂ.30:ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಬಡ ಪ್ರತಿಭಾವಂತ ಮಕ್ಕಳಿಗೆ ಕಮ್ಮಗೊಂಡನಹಳ್ಳಿ ಶ್ರೀಮಾರುತಿ ಸೇವಾ ಸಮಿತಿ ವತಿಯಿಂದ ನಡೆಯುತ್ತಿರುವ ಡಾ.ಶ್ರೀಶಿವಕುಮಾರಸ್ವಾಮೀಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 100-150 ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ,ವಸತಿ ಸಹಿತ ವೃತ್ತಿಪರ ಕೋರ್ಸುಗಳಲ್ಲಿ ವ್ಯಾಸಾಂಗ ಮಾಡುವ ಅವಕಾಶವನ್ನು ಸಮಿತಿಯ ಅಧ್ಯಕ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸಿ.ಚನ್ನಿಗಪ್ಪ ಕಲ್ಪಿಸಿದ್ದು, ಗ್ರಾಮಾಂತರ ಕ್ಷೇತ್ರದ ಪ್ರತಿಭಾನ್ವಿತ ಮಕ್ಕಳು ಇದರ ಲಾಭ ಪಡೆದುಕೊಳ್ಳುವಂತೆ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಮನವಿ ಮಾಡಿದ್ದಾರೆ.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ನಿಡುವಳಲು,ಸಂಕಾಪುರ,ಲಕ್ಷ್ಮಣಸಂದ್ರ,ಕಣಕುಪ್ಪೆ, ಸೋರೆಕುಂಟೆ ಗ್ರಾಮಗಳ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ,ಪ್ರತಿಭಾನ್ವಿತ ಬಡ ರೈತ ಕುಟುಂಬದ ಮಕ್ಕಳಿಂದ ಅರ್ಜಿ ಸ್ವೀಕರಿಸಿ ಮಾತನಾಡಿ ದ ಅವರು, ರಾಜ್ಯದ ಇತಿಹಾಸದಲ್ಲಿಯೇ ಪ್ರತಿವರ್ಷ 100ರಿಂದ 150 ಇಂಜಿನಿಯರಿಂಗ್, ಡಿಪ್ಲಮೋ, ಎಂ.ಟೆಕ್, ಎಂ.ಬಿ.ಎ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಮುಂದಾಗಿದ್ದು,ಅರ್ಜಿ ಆಹ್ವಾನಿಸಿದ ಒಂದು ದಿನದಲ್ಲಿಯೇ 148 ಅರ್ಜಿಗಳು ಬಂದಿದ್ದು,ಇವರಲ್ಲಿ 42 ಜನರಿಗೆ ಈಗಾಗಲೇ ಅವಕಾಶ ಕಲ್ಪಿಸಲಾಗಿದೆ.ಜುಲೈ 15ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.ಇಂದು ಒಂದು ಇಚಿಜಿನಿಯರಿಂಗ್ ಸೀಟ್‌ಗೆ ಲಕ್ಫ್ಷೃಂತರ ರೂ ಡೊನೇಷನ್ ಕಟ್ಟಬೇಕಾಗಿದೆ.ಹಣಕ್ಕೆ ಆಸೆ ಪಡದೆ ನಮ್ಮ ತಂದೆಯವರು ಬಡಮಕ್ಕಳು ಇಚಿಜಿನಿಯರ್ ಆಗಲು ಅವಕಾಶ ಕಲ್ಪಿಸಿದ್ದು,ಗ್ರಾಮೀಣ ಭಾಗದ ರೈತರ,ಕಡು ಬಡವರ ಪ್ರತಿಭಾನ್ವಿತ ಮಕ್ಕಳು ಇದರ ಲಾಭ ಪಡೆದುಕೊಳ್ಳ ಬೇಕೆಂದರು.

ನಮ್ಮ ತಂದೆ ಸಿ.ಚನ್ನಿಗಪ್ಪ ಸಿದ್ದಗಂಗಾ ಮಠದಲ್ಲಿ ಡಾ.ಶ್ರೀಶಿವಕುಮಾರಸ್ವಾಮೀಜಿಗಳ ಆಶ್ರಯದಲ್ಲಿ ವಿದ್ಯಾಭ್ಯಾಸ ಮಾಡಿ, ಶಿಕ್ಷಕ ವೃತ್ತಿ ಆರಂಭಿಸಿ ಹಂತ ಹಂತವಾಗಿ ಈ ಮಟ್ಟಕ್ಕೆ ಬೆಳೆದಿದ್ದಾರೆ.ಸಮಾಜದಿಂದ ಪಡೆದಿರುವುದನ್ನು ಸಮಾಜಕ್ಕೆ ನೀಡುವ ನಿಟ್ಟಿನಲ್ಲಿ ಈ ಹಿಂದಿನಿಂದಲೂ ಆಶ್ರಮಶಾಲೆ ನಡೆಸುತ್ತಿದ್ದು, ಕಳೆದ 10ವರ್ಷಗಳಿಂದ ಇಂಜಿನಿಯರಿಂಗ್ ಮತ್ತಿತರರ ವೃತ್ತಿಪರ ಕಾಲೇಜು ಆರಂಭಿಸಿದ್ದು, ಪ್ರತಿಭಾನ್ವಿತರಿಗೆ ಉಚಿತವಾಗಿ ಕಲಿಯಲು ಅವಕಾಶ ಕಲ್ಪಿಸಲಾಗಿತ್ತು. ಈ ವರ್ಷದಿಂದ ವಿಶೇಷವಾಗಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ 100 ಜನ ಬಡ ರೈತರ ಮಕ್ಕಳಿಗೆ ಉಚಿತ ಇಂಜಿನಿಯರಿಂಗ್ ಶಿಕ್ಷಣ ನೀಡಲು ಮುಂದಾಗಿದ್ದಾರೆ.ನಿರೀಕ್ಷೆಗೂ ಮೀರಿ ಹೆಚ್ಚು ಅರ್ಜಿಗಳು ಬರುತ್ತಿರುವ ಹಿನ್ನೆಲೆಯಲ್ಲಿ 100 ಇರುವ ಸೀಟು 150ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ.ಕಾಲೇಜು ಇರುವವರೆಗೂ ಪ್ರತಿವರ್ಷ ಈ ಯೋಜನೆಯನ್ನು ಮುಂದುವರೆಸಿಕೊಂಡು ಹೋಗ ಲಾಗುವುದು ಎಂದು ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.

ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಕಮ್ಯುನಿಕೇಷನ್, (ಇಸಿ)ಎಲೆಕ್ಟ್ರಾನಿಕ್ಸ್ & ಎಲೆಕ್ಟ್ರೀಕಲ್, (ಇಇ) ಮೇಕಾನಿಕಲ್ (ಎಂ.ಇ),ಸಿವಿಲ್,ಕಂಪ್ಯೂಟರ್ ಸೈನ್ಸ್(ಸಿ.ಎಸ್.)ಹಾಗೂ ಎರೋನಾಟಿಕಲ್ ಕೋರ್ಸುಗಳಿದ್ದು,ಇದರ ಜೊತೆಗೆ ಡಿಪ್ಲಮೋ, ಎಂ.ಟೆಕ್,ಎಂ.ಬಿ.ಎ. ಕೋರ್ಸುಗಳಿಗೂ ಪ್ರತಿಭಾನ್ವಿತ ಬಡ ರೈತರ ಮಕ್ಕಳು ಸೇರಲು ಅವಕಾಶ ಕಲ್ಪಿಸಲಾಗುವುದು. ಜುಲೈ 15ರವರೆಗೆ ಬರುವ ಅರ್ಜಿಗಳನ್ನು ಒಟ್ಟುಗೂಡಿಸಿ,ಆರ್ಹ ರೈತರ, ಬಡವರ ಮಕ್ಕಳಿಗೆ ಪ್ರವೇಶಾವಕಾಶ ಕಲ್ಪಿಸಲಾ ಗುವುದು.ಇದು ಚುನಾವಣೆಯ ದೃಷ್ಟಿಯಿಂದ ರೂಪಿಸಿರುವ ಕಾರ್ಯಕ್ರಮವಲ್ಲ. ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಮಾಡಿದ ಶಾಶ್ವತ ಯೋಜನೆ ಎಂದು ಡಿ.ಸಿ.ಗೌರಿಶಂಕರ್ ನುಡಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ರವಿ ಜಹಾಂಗೀರ್,ಜಿ.ಪಂ.ಮಾಜಿ ಸದಸ್ಯ ಭೀಮಸಂದ್ರ ಕೃಷ್ಣಪ್ಪ,ತಾಲೂಕು ಜೆಡಿಎಸ್ ಅಧ್ಯಕ್ಷ ಡಾ.ಕುಮಾರ್, ಪಾಲನೇತ್ರಯ್ಯ, ಸುವರ್ಣಗಿರಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News