×
Ad

ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡುವ ವಿಚಾರ ಕೇವಲ ಒಂದು ರಾಜ್ಯಕ್ಕೆ ಸಂಬಂಧಿಸಿದ್ದಲ್ಲ :ಸಂಸದ ಜಿ.ಎಂ. ಸಿದ್ದೇಶ್ವರ್

Update: 2017-06-30 18:29 IST

ದಾವಣಗೆರೆ,ಜೂ.30: ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡುವ ವಿಚಾರ ಕೇವಲ ಒಂದು ರಾಜ್ಯಕ್ಕೆ ಸಂಬಂಧಿಸಿದ್ದಲ್ಲ, ಕೇಂದ್ರ ಸರ್ಕಾರ ಸಾಲಮನ್ನಾ ವಿಚಾರ ಕೈಗೆತ್ತಿಕೊಂಡರೆ ಅದು ಇಡೀ ದೇಶಕ್ಕೆ ಸಂಬಂಧಿಸುತ್ತದೆ, ಆದರೂ, ನಮ್ಮ ಪಕ್ಷದ ರಾಜ್ಯ ನಾಯಕರ ಜೊತೆ ಚರ್ಚೆ ನಡೆಸಿ ಈ ವಿಚಾರವಾಗಿ ನಮ್ಮ ನಾಡಿನ ರೈತರ ಹಿತಕಾಯುವ ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮುಂಬರುವ ಅಧಿವೇಶನದ ಸಮಯದಲ್ಲಿ ಪ್ರಧಾನಮಂತ್ರಿಗಳ ಹಾಗೂ ಆರ್ಥಿಕ ಸಚಿವರ ಜೊತೆ ನಮ್ಮ ರಾಜ್ಯ ನಾಯಕರುಗಳ ಮೂಲಕ ರೈತರ ಸಾಲಮನ್ನಾ ಮಾಡುವ ವಿಚಾರವಾಗಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಮನವೊಲಿಸುವ ಎಲ್ಲಾ ಪ್ರಯತ್ನವನ್ನು ಮಾಡುತ್ತೇವೆ. ಸ್ವತ: ನಾನೂ ರೈತನಾಗಿರುವುದರಿಂದ ರಾಜ್ಯದಲ್ಲಿ ರೈತರ ಪರಿಸ್ಥಿತಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಏನಾಗಿದೆ ಎನ್ನುವುದನ್ನೂ ನಾನು ಅರ್ಥಮಾಡಿಕೊಳ್ಳಬಲ್ಲೆ ಎಂದಿದ್ದಾರೆ.

ಉತ್ತರ ಪ್ರದೇಶ, ಮಧ್ಯಪ್ರದೇಶ, ಪಂಜಾಬ್ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ 1.5ಯಿಂದ 2 ಲಕ್ಷದವರೆಗೆ ರೈತರ ಸಾಲಮನ್ನಾ ಮಾಡಿರುವಾಗ ನಮ್ಮ ರಾಜ್ಯದಲ್ಲಿ ಅನೇಕ ಷರತ್ತು ವಿಧಿಸಿ ಕೇವಲ 50 ಸಾವಿರ ಮನ್ನಾ ಮಾಡಿರುವುದು ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲಾರದು ಎನ್ನುವುದು ನಮ್ಮ ಭಾವನೆ. ತೀರಾ ಬಡಕುಟುಂಬದಿಂದ ಬಂದಿರುವ ನಮ್ಮ ಪ್ರಧಾನಮಂತ್ರಿಗಳೂ ರೈತರ ಬಗ್ಗೆ ಕಳಕಳಿವುಳ್ಳವರಾಗಿದ್ದು ರೈತರ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳಬಲ್ಲರು ಎನ್ನುವ ಆಶಾಭಾವನೆಯನ್ನು ನಾವು ಹೊಂದಿದ್ದೇವೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News