ಕಾಮಗಾರಿ ಪರಿಶೀಲನೆಗೆ ತೆರಳಿದ್ದ ಗ್ರಾಮ ಸಹಾಯಕನ ಮೇಲೆ ಹಲ್ಲೆ
ನಾಗಮಂಗಲ, ಜೂ.30: ಸಾರ್ವಜನಿಕರ ದೂರಿನ ಮೇರೆಗೆ ಅಕ್ರಮ ಕಟ್ಟಡ ಕಾಮಗಾರಿ ಪರಿಶೀಲನೆಗೆ ತೆರಳಿದ್ದ ಗ್ರಾಮ ಸಹಾಯಕನ ಮೇಲೆ ದೊಣ್ಣೆಯಿಂದ ಅಟ್ಟಾಡಿಸಿ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಬಂಕಾಪುರ ಗ್ರಾಮದಲ್ಲಿ ನಡೆದಿದ್ದು, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಠಾಣೆ ಎದುರು ಗ್ರಾಮ ಸಹಾಯಕರು ಪ್ರತಿಭಟನೆ ನಡೆಸಿದರು.
ತಾಲೂಕು ಗ್ರಾಮ ಸಹಾಯಕರ ಸಂಘದ ಅದ್ಯಕ್ಷ ಯೋಗೇಶ್ ಎಂಬುವರೇ ಹಲ್ಲೆಗೊಳಗಾದವರಾಗಿದ್ದು, ಇವರು ಕಾಂತಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಜಸ್ವ ನಿರೀಕ್ಷಕ(ಆರ್.ಐ)ರ ಗ್ರಾಮ ಸಹಾಯಕರಾಗಿದ್ದಾರೆ.
ಗೊಲ್ಲರಹಟ್ಟಿ ದಾಖ್ಲೆ ಗ್ರಾಮದ ಬಂಕಾಪುರದಲ್ಲಿ ಸರಕಾರಿ ಜಾಗದಲ್ಲಿ ಅಕ್ರಮ ಕಟ್ಟಡ ಕಾಮಗಾರಿ ನಡೆಯುತ್ತಿರುವ ಬಗ್ಗೆ ತಹಶೀಲ್ದಾರ್‌ಗೆ ಸಾರ್ವಜನಿಕರಿಂದ ದೂರು ಬಂದಿತ್ತು. ಆದ್ದರಿಂದ ಗುರುವಾರ ಬೆಳಗ್ಗೆ 1.30ರಲ್ಲಿ ಆರ್‌ಐ ರಾಮಯ್ಯನವರ ಸೂಚನೆ ಮೇರೆಗೆ ಹಲ್ಲೆಗೊಳಗಾದ ಯೋಗೇಶ್ ಸ್ಥಳ ಪರಿಶೀಲನೆಗೆಂದು ಕಛೇರಿಯ ಸಹಾಯಕ ಮತ್ತೋರ್ವ ಯೋಗೇಶ್ ಎಂಬುವರೊಂದಿಗೆ ಸ್ಥಳಕ್ಕೆ ತೆರಳಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಬಂಕಾಪುರ ಗ್ರಾಮದ ಮಂಜು ಮತ್ತು ಇಬ್ಬರು ಸಂಗಡಿಗರು ಸೇರಿಕೊಂಡು ಯೋಗೇಶ್ ಅವರನ್ನು ಅಟ್ಟಾಡಿಸಿ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ ಮತ್ತು ಸಂಗಡಿಗರಿಂದ ಈತನ ಕೈಗಳನ್ನು ಬಿಗಿಹಿಡಿದು ಮನಬಂದಂತೆ ಬಡಿದಿದ್ದಾರೆ. ಸಹಾಯಕ್ಕೆ ಬಂದ ಕಛೇರಿ ಸಹಾಯಕ ಯೋಗೇಶ್ ಮೇಲು ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಯಾರೂ ಇವರ ಸಹಾಯಕ್ಕೆ ಬರಲಿಲ್ಲ ಎಂದು ತಿಳಿದು ಬಂದಿದೆ.
ನಂತರ, ಘಟನೆ ಬಗ್ಗೆ ದೂರವಾಣಿ ಮೂಲಕ ತಹಶೀಲ್ದಾರ್ ಶಿವಣ್ಣನವರಿಗೆ ವಿಷಯ ತಿಳಿಸಿದ ಯೋಗೇಶ್ ಪಟ್ಟಣದ ಜನರಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಗ್ಗೆ ಗ್ರಾಮಾಂತರ ಠಾಣೆಗೆ ದೂರು ನೀಡಿದರೂ ಪೊಲೀಸರು ಅರೋಪಿಗಳನ್ನು ಬಂಧಿಸಿಲ್ಲವೆಂದು ಆಕ್ರೋಶಿತಗೊಂಡ ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿಗಳು ಮತ್ತು ಗ್ರಾಮ ಸಹಾಯಕರು ಗ್ರಾಮಾಂತರ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಆರೋಪಿಗಳ ಬಂಧನ ಭರವಸೆ ಸಿಕ್ಕ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದರು.