×
Ad

ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತನ್ನಿ : ಎಚ್.ಡಿ. ಕುಮಾರಸ್ವಾಮಿ

Update: 2017-07-01 18:52 IST

ದಾವಣಗೆರೆ,ಜು.1:ಈವರೆಗೆ ನಿಮ್ಮನ್ನಾಳುವ ಸರ್ಕಾರಗಳಿಗೆ ಅವಕಾಶ ಕೊಟ್ಟಿದ್ದೀರಿ. ಇದೊಂದು ಬಾರಿ ನೀವು ನೀಡುವ ಸೂಚನೆಯಂತೆ ನಡೆಯುವ ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.

ನಗರದ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜನತೋತ್ಸವ ಹಾಗೂ ರಾಜ್ಯಮಟ್ಟದ ಜೆಡಿಎಸ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

2018ರ ಚುನಾವಣೆಯಲ್ಲಿ ಯಾವುದೇ ಪಕ್ಷದ ಜೊತೆ ಕೈಜೋಡಿಸುವುದು ಬೇಡ. ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದಕ್ಕಾಗಿ ಒಂದು ಬಾರಿ ಅವಕಾಶ ಮಾಡಿಕೊಡಿ. ಹತ್ತಾರೂ ವರ್ಷಗಳ ಕಾಲ ಮಾಡಿದ ಕಾರ್ಯಗಳನ್ನು ನನ್ನ ಅಧಿಕಾರವಧಿಯ ಕೇವಲ 20 ತಿಂಗಳಲ್ಲಿ ಮಾಡಿದ್ದೇನೆ. ಇನ್ನೂ, ಸಂಪೂರ್ಣ 5 ವರ್ಷ ನಮ್ಮದೇ ಸರ್ಕಾರ ರಚನೆಯಾದರೆ ಇಡೀ ದೇಶದಲ್ಲಿಯೇ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಎಲ್ಲೋ ಇರುವ ಮೋದಿಗೆ ಮತ ನೀಡಿ ಆರಿಸಿ ಕಳುಹಿಸಿದ್ದೀರಿ. ನಿಮ್ಮೊಳಗೆ ಇರುವ ನನ್ನನ್ನು ಆಯ್ಕೆ ಮಾಡಿನೋಡಿ. ಕೆಲಸ ಮಾಡದಿದ್ದರೆ ನನ್ನ ಶರ್ಟ್ ಹಿಡಿದು ಕೇಳುವ ಹಕ್ಕು ನಿಮಗಿದೆ. ನನಗೆ ಯಾವುದೇ ಪೊಲೀಸ್ ಬೆಂಗಾವಲೂ ಇಲ್ಲ ಎಂದ ಅವರು, ಪ್ರಾದೇಶಿಕ ಪಕ್ಷದ ಉಳಿವಿಗಾಗಿ, ನಮ್ಮನ್ನು ಪರೀಕ್ಷೆ ಮಾಡುವ ಸಲುವಾಗಿಯಾದರೂ ಒಮ್ಮೆ ಅವಕಾಶ ಕೊಟ್ಟು ನೋಡಿ ಎಂದು ಅವರು ಪುನರಾವರ್ತಿಸಿದರು.

ಜೆಡಿಎಸ್ ಅಪ್ಪ, ಮಕ್ಕಳ ಪಕ್ಷವಲ್ಲ. ಇದು ನಿಮ್ಮ ಪಕ್ಷ. ನಮ್ಮ ಪಕ್ಷದಿಂದಲೇ ಬೆಳಕಿಗೆ ಬಂದು ಅನೇಕರು ಎತ್ತರಕ್ಕೆ ಹೋಗಿ, ಇಂದು ಪಕ್ಷವನ್ನು ಮರೆತು ಮಾತನಾಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳು ಎಂದಿದ್ದರೂ ರೈತರಿಗೆ ಮಾರಕ ಎಂಬುದನ್ನು ಎಲ್ಲರೂ ಅರಿಯಬೇಕು ಎಂದ ಅವರು, ಸಿಎಂ ಸಿದ್ದರಾಮಯ್ಯ ರೈತರ ಸಾಲ ಮನ್ನಾ ಮಾಡಿದ ನಂತರದಲ್ಲಿಯೇ ರಾಜ್ಯದಲ್ಲಿ 15 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಮಾತ್ರ ಕೂಡಲಸಂಗಮದಲ್ಲಿ ವೀರಾವೇಶದ ಮಾತುಗಳನ್ನಾಡುತ್ತಿದ್ದಾರೆ. ಪಕ್ಕದಲ್ಲಿಯೇ ರೈತ ಆತ್ಮಹತ್ಯೆ ಮಾಡಿಕೊಂಡಿದ್ದರೂ ಕನಿಷ್ಠ ಸೌಜನ್ಯಕ್ಕೂ ಸಾಂತ್ವನ ಹೇಳಿಲ್ಲ. ಉಳಿದ ಯಾರೋಬ್ಬರೂ ರೈತನ ಮನೆಗೆ ಭೇಟಿ ನೀಡಿಲ್ಲ ಎಂದು ಅವರು ಆರೋಪಿಸಿದರು.

ಈವರೆಗೆ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ 3 ಸಾವಿರ ರೈತರಿಗೆ ನಮ್ಮ ಪಕ್ಷದ ವತಿಯಿಂದ ಕೈಲಾದ ಸಹಾಯ ಮಾಡಲಾಗುತ್ತಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣವೇ ರೈತರ ಎಲ್ಲಾ ಸಾಲ ಮನ್ನಾ ಮಾಡುವುದು ನಿಶ್ಚಿತ ಎಂದರು.

ಮಾಜಿ ಪ್ರಧಾನಿ ದೇವೇಗೌಡ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳು ನಮ್ಮನ್ನು ತುಳಿಯುವ ಹುನ್ನಾರ ನಡೆಸಿವೆ. ರಾಜ್ಯದ ಜನತೆಯ ಶ್ರೇಯೋಭಿವೃದ್ಧಿಗೆ ಪ್ರಾದೇಶಿಕ ಪಕ್ಷ ಅತ್ಯಗತ್ಯವಾಗಿದ್ದು, ಎಲ್ಲರೂ ಪ್ರಾದೇಶಿಕ ಪಕ್ಷ ಬೆಂಬಲಿಸುವ ಮೂಲಕ ಮುಂದಿನ ಮುಖ್ಯಮಂತ್ರಿಯನ್ನಾಗಿ ಕುಮಾರಸ್ವಾಮಿಯನ್ನು ಆಯ್ಕೆ ಮಾಡಬೇಕೆಂದರು.

ಮಧ್ಯಕರ್ನಾಟಕ ದಾವಣಗೆರೆ ಪುಣ್ಯಭೂಮಿಯಿದ್ದಂತೆ. ಇಲ್ಲಿ ಹತ್ತಾರೂ ಮಠ, ಮಠಾಧೀಶರು ನೆಲೆಸಿದ್ದು, ಇಲ್ಲಿ ಯಾವುದೇ ಕಾರ್ಯ ಕೈಗೊಂಡರೂ ಜಯ ನಿಶ್ಚಿತ. ಆದ್ದರಿಂದಲೇ ಪಟ್ಟು ಹಿಡಿದು ದಾವಣಗೆರೆಯಲ್ಲಿ ಸಮಾವೇಶ ಮಾಡಿಸುತ್ತಿದ್ದೇನೆ ಎಂದ ಅವರು, ಕುಮಾರಸ್ವಾಮಿ ಮಾತಿನಂತೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುವುದು ನಿಶ್ಚಿತ. ಆದ್ದರಿಂದ ನಿಮ್ಮನ್ನು ತುಳಿಯುವ ಪಕ್ಷಗಳು ಬೇಕೋ ಅಥವಾ ಪ್ರಾದೇಶಿಕ ಪಕ್ಷ ಬೇಕೋ ನೀವೇ ತೀರ್ಮಾನಿಸಿ ಎಂದು ಅವರು ಹೇಳಿದರು.

ಸಮಾವೇಶದಲ್ಲಿ 50 ಸಾವಿರಕ್ಕೂ ಅಧಿಕ ಜೆಡಿಎಸ್ ಕಾರ್ಯಕರ್ತರು ಹಾಗೂ ವಾಲ್ಮೀಕಿ ಸಮುದಾಯದವರು ಭಾಗವಹಿಸಿದ್ದರು.

ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್, ಎಸ್‍ಟಿ ಘಟಕದ ರಾಜ್ಯಧ್ಯಕ್ಷ ಹೊದಿಗೆರೆ ರಮೇಶ್, ಶಾಸಕರಾದ ಎಚ್.ಎಸ್. ಶಿವಶಂಕರ್, ಬಿ.ಪಿ. ನಿಂಗಣ್ಣ, ಕೋನರೆಡ್ಡಿ, ಚಿಕ್ಕಮಾದು, ಮಧುಬಂಗಾರಪ್ಪ, ಶರವಣ, ರಮೇಶ್ ಬಾಬು, ಚೌಡರೆಡ್ಡಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News