×
Ad

​70 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಆಡಳಿತ್ಮಾಕ ಅನುಮೋದನೆ ದೊರಕಬೇಕು: ದತ್ತ

Update: 2017-07-01 19:59 IST

ಕಡೂರು, ಜು.1: ಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಸಮೀಪದ ಗೊಂಧಿ ಅಣೆಕಟ್ಟಿನಿಂದ ಏತ ನೀರಾವರಿ ಯೋಜನೆಯಡಿ ತಾಲೂಕಿನ 70 ಕೆರೆಗಳಿಗೆ ನೀರು ತುಂಬಿಸುವ ಯೋಜನಾ ವರದಿಗೆ ಸರ್ಕಾರದ ಆಡಳಿತ್ಮಾಕ ಅನುಮೋದನೆ ದೊರಕಬೇಕಾಗಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.

ಅವರು ಶನಿವಾರ ತಾಲೂಕಿನ ಹುಲಿಗುಂದಿ ಗ್ರಾಮದಲ್ಲಿ ಪಾದಯಾತ್ರೆ ವೇಳೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಕಳೆದ 2 ದಶಕಗಳಿಂದ ಹೆಬ್ಬೆ ಜಲ ತಿರುವು ಯೋಜನೆಯ ಅನುಷ್ಟಾನಕ್ಕೆ ಅನೇಕ ಪ್ರಯತ್ನಗಳು ನಡೆಯುತ್ತಿವೆ. ದಿವಂಗತ ಶಾಸಕ ಕೆ.ಎಂ. ಕೃಷ್ಣಮೂರ್ತಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಶತಯಾಗತಯ ಪ್ರಯತ್ನಿಸಿದರು, ಈ ಯೋಜನೆ ಕಾರ್ಯಸಾದುವಾಗಿರಲಿಲ್ಲ ಎಂದು ಹೇಳಿದರು.

ತಾವು ವಿಧಾನಪರಿಷತ್ ಸದಸ್ಯನಾಗಿದ್ದಾಗ ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದಲ್ಲದೆ, ಇದರ ಅನುಷ್ಟಾನಕ್ಕೆ ಪ್ರಯತ್ನ ಪಟ್ಟಿದ್ದೆ. ಆ ಸಮಯದಲ್ಲಿ ಸರ್ಕಾರ ಹೆಬ್ಬೆ ಜಲ ತಿರುವು ಯೋಜನೆ ಮುಗಿದ ಅಧ್ಯಾಯ ಎಂದು ತಿಳಿಸಿತ್ತು. ಇದರಿಂದ ತಾವು ನಿರಾಸೆಗೊಂಡಿದ್ದೆ. ಕೃಷ್ಣ ನೀರಾವರಿ ನಿಗಮದ ಯೋಜನೆಯಲ್ಲಿ ತಾಲೂಕಿಗೆ 1.538 ಟಿಎಂಸಿ ನೀರನ್ನು ನಿಗದಿಪಡಿಸಲಾಗಿದೆ. ಇದು ಹಕ್ಕಾಗಿದ್ದು, ಈ ನೀರಿನಿಂದ ತಾಲೂಕಿನ ವಿಷ್ಣು ಸಮುದ್ರ, ದೇವನಕೆರೆಯನ್ನು ತುಂಬಿಸಿ ಉಳಿದ 68 ಕೆರೆಗಳನ್ನು ತುಂಬಿಸಲು ನೀಲಾ ನಕ್ಷೆಯನ್ನು ಸಿದ್ದಪಡಿಸಲಾಗಿದೆ. ಈ ಯೋಜನೆಗೆ ಅಂದಾಜು ರೂ. 565 ಕೋಟಿ ವೆಚ್ವಾಗಲಿದ್ದು, ಇದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ಯಾವುದೇ ಶಾಶ್ವತ ನೀರಾವರಿ ಯೋಜನೆಗಳು ಶಕ್ತಿ ಪ್ರದರ್ಶನದಿಂದ ಕಾರ್ಯರೂಪಕ್ಕೆ ಬರುವುದಿಲ್ಲ, ಯುಕ್ತಿಯಿಂದ ಅವುಗಳನ್ನು ಅನುಷ್ಟಾನಗೊಳಿಸಬೇಕು. ಈ ಯೋಜನೆ ಅನುಷ್ಟಾನಗೊಂಡಲ್ಲಿ ತಾಲೂಕಿನ ಮದಗದಕೆರೆ ಸೇರಿದಂತೆ ಇತರೆ 70 ಕೆರೆಗಳಿಗೆ ನೀರನ್ನು ಒದಗಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ಸದನದಲ್ಲಿ ಚರ್ಚೆ ನಡೆದ ನಂತರ ಆಡಳಿತ್ಮಾಕ ಅನುಮೋದನೆ ಹಾಗೂ ಅನುದಾನ ಸಿಗುವ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದರು.

ಈ ಸಂದರ್ಭ ಪಕ್ಷದ ಮುಖಂಡರಾದ ಭಂಡಾರಿಶ್ರೀನಿವಾಸ್, ಕೆ.ಎಸ್. ರಮೇಶ್, ಕೆ.ಹೆಚ್. ಲಕ್ಕಣ್ಣ, ಸೀಗೇಹಡ್ಲು ಹರೀಶ್, ಪುಟ್ಟೇಗೌಡ, ರೇವಣಸಿದ್ದಪ್ಪ, ಉಪೇಂದ್ರನಾಥ್, ಸುರತಾಳ್ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News