×
Ad

ಅಧಿಕಾರಿಗಳನ್ನು ಅಮಾನತಿನಲ್ಲಿ ಯಾಕೆ ಇಟ್ಟಿಲ್ಲ: ಸರಕಾರದ ವಿರುದ್ಧ ಕಿಡಿ ಕಾರಿದ ಹೈಕೋರ್ಟ್

Update: 2017-07-01 20:55 IST

ಬೆಂಗಳೂರು, ಜು.1: ನೋಟಿಸ್ ನೀಡಿ ಆಕ್ಷೇಪಣೆ ಲ್ಲಿಸಲೂ ಅವಕಾಶ ಕೊಡದೇ ಜಮೀನೊಂದರ ಸುತ್ತ ನಿರ್ಮಿಸಿದ್ದ ತಡೆಗೋಡೆ ಕೆಡವಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ ಮತ್ತು ಬೆಂಗಳೂರು ದಕ್ಷಿಣ ತಾಲೂಕು ತಹಶೀಲ್ದಾರರನ್ನು ಅಮಾನತಿನಲ್ಲಿ ಇರಿಸಬೇಕೆಂಬ ಆದೇಶವನ್ನು ಇನ್ನೂ ಯಾಕೆ ಪಾಲಿಸಿಲ್ಲ ಎಂದು ಹೈಕೋರ್ಟ್ ಸರಕಾರದ ವಿರುದ್ಧ ಕಿಡಿಕಾರಿದೆ.

ಈ ಸಂಬಂಧ ನಗರದ ಎಸ್.ಸಿ.ಗೋಕರ್ಣ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳೀಮಠ ಅವರಿದ್ದ ಪೀಠ, ಬೆಂಗಳೂರು ದಕ್ಷಿಣ ತಾಲೂಕು ತಹಶೀಲ್ದಾರ್ ಎಸ್.ಎ.ಶಿವಕುಮಾರ್ ಮತ್ತು ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಡಿ.ಬಿ.ನಟೇಶ್ ಅವರನ್ನು ಅಮಾನತುಗೊಳಿಸುವಂತೆ ಆದೇಶಿಸಿದ್ದರೂ ಇನ್ನೂ ಯಾಕೆ ಪಾಲಿಸಿಲ್ಲ. ಹಾಗಾದರೆ ಕೋರ್ಟ್‌ಗೆ ಅವಿಧೇಯತೆ ತೋರಿದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನೇ ಯಾಕೆ ಅಮಾನತು ಮಾಡಬಾರದೆಂದು ಪ್ರಶ್ನಿಸಿದ ಪೀಠ ಇದರ ಬಗ್ಗೆ ಸೋಮವಾರ ವಿವರಣೆ ಸಲ್ಲಿಸಲು ಸೂಚನೆ ನೀಡಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಎಎಜಿ ಪೊನ್ನಣ್ಣ ಅವರು, ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ ಮತ್ತು ಬೆಂಗಳೂರು ದಕ್ಷಿಣ ತಾಲೂಕು ತಹಶೀಲ್ದಾರರನ್ನು ಅಮಾನತಿನಲ್ಲಿ ಇರಿಸಬೇಕೆಂಬ ಆದೇಶವನ್ನು ಮಾರ್ಪಾಡು ಮಾಡಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಈ ಮನವಿಯನ್ನು ತಿರಸ್ಕರಿಸಿದ ನ್ಯಾಯಪೀಠವು ಇನ್ನು ಈ ಇಬ್ಬರನ್ನು ಯಾಕೆ ಅಮಾನತಿನಲ್ಲಿ ಇಟ್ಟಿಲ್ಲ ಎಂಬುದರ ಬಗ್ಗೆ ಸೋಮವಾರ ವಿವರಣೆ ಸಲ್ಲಿಸಲು ಸೂಚಿಸಿತು.

ಪ್ರಕರಣವೇನು?: ಬೆಂಗಳೂರು ದಕ್ಷಿಣ ತಾಲೂಕು, ಉತ್ತರಹಳ್ಳಿ ಹೋಬಳಿಯ ಕೊತ್ತನೂರು ವ್ಯಾಪ್ತಿಯ 57 ಎಕರೆ ಜಮೀನಿಗೆ ಸಂಬಂಧಿಸಿದಂತೆ ವ್ಯಾಜ್ಯವಿದ್ದು, ಈ ಪ್ರದೇಶದಲ್ಲಿ ಮೆಟ್ರೊ ರೈಲು ಮಾರ್ಗ ಹಾದು ಹೋಗಿದೆ. ಇದಕ್ಕಾಗಿ ಅರ್ಜಿದಾರರಾದ ಗೋಕರ್ಣ ಅವರಿಗೆ ಸೇರಿದ ಜಮೀನಿಗೆ ಕಾಂಪೌಂಡ್ ನಿರ್ಮಿಸಲಾಗಿದೆ. ಆದರೆ ಜಮೀನು ಒತ್ತುವರಿ ಆರೋಪದ ಮೇಲೆ ತಡೆಗೋಡೆ ಕೆಡವಲು ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ 2017ರ ಮೇ.26ರಂದು ಆದೇಶಿಸಿದ್ದರು. ಆದೇಶದ ಮರುದಿನವೇ ತಡೆಗೋಡೆಯನ್ನು ಕೆಡವಲಾಗಿದ್ದು, ನಮಗೆ ಯಾವುದೇ ಪೂರ್ವಸೂಚನೆ ನೀಡದೇ, ನಮ್ಮ ಆಕ್ಷೇಪಣೆ ಕೇಳದೇ ತಡೆಗೋಡೆಯನ್ನು ಕೆಡವಲಾಗಿದೆ ಎಂದು ಆರೋಪಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News