ಕುಕ್ಕಸಮುದ್ರ ಬ್ಯಾರೇಜ್ ನಿರ್ಮಾಣಕ್ಕೆ ರೂ. 6 ಕೋಟಿ ಅನುದಾನ ಮಂಜೂರು: ವೈಎಸ್‌ವಿ ದತ್ತ
ಕಡೂರು, ಜು.2: ತಾಲೂಕಿನ ಕುಕ್ಕಸಮುದ್ರ ಬ್ಯಾರೇಜ್ ನಿರ್ಮಾಣಕ್ಕೆ ರೂ. 6 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
ಅವರು ರವಿವಾರ ಕ್ಷೇತ್ರದ ಪಾದಯಾತ್ರೆ ಸಂದರ್ಭ ತಾಲೂಕಿನ ಹುಲಿಗುಂದಿ ಗ್ರಾಮದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕಡೂರು ತಾಲೂಕು ಡಾ. ಡಿ.ಎಂ. ನಂಜುಂಡಪ್ಪ ವರದಿಯ ಅನ್ವಯ ಅತ್ಯಂತ ಹಿಂದುಳಿದ ತಾಲೂಕು ಆಗಿದ್ದು, ತಾವು ಮತ್ತು ಹೊಸದುರ್ಗ ಕ್ಷೇತ್ರದ ಶಾಸಕ ಬಿ.ಜಿ. ಗೋವಿಂದಪ್ಪ, ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸುರೇಶ್‌ಬಾಬು ಪ್ರಯತ್ನದಿಂದ ಈ ಅನುದಾನ ಬಂದಿದೆ. ವಿಶ್ವೇಶ್ವರಯ್ಯ ಜಲ ನಿಗಮ ವತಿಯಿಂದ ವಿಶೇಷ ಅಭಿವೃದ್ದಿ ಯೋಜನೆಯಡಿ ಅತ್ಯಂತ ಹಿಂದುಳಿದ ತಾಲುಕುಗಳನ್ನು ಗುರುತಿಸಿ ಕೆರೆ ಅಭಿವೃದ್ದಿಗೆ ಅನುದಾನ ನೀಡಲಾಗಿದೆ. ಇದರಲ್ಲಿ ಕಡೂರು ತಾಲೂಕಿನ ಕುಕ್ಕಸಮುದ್ರ ಕೆರೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕುಕ್ಕಸಮುದ್ರ ಕೆರೆ ತಾಲೂಕಿನ ಅತ್ಯಂತ ದೊಡ್ಡ ಕೆರೆಯಾಗಿದ್ದು, ಇದರಲ್ಲಿ ಎರಡು ತೂಬುಗಳಿದ್ದು, ಈ ಎರಡು ತೂಬುಗಳಿಗೆ ರೂ. 6 ಕೋಟಿ ವೆಚ್ಚದಲ್ಲಿ ಎರಡು ಬ್ಯಾರೇಜ್ ನಿರ್ಮಾಣವಾಗಲಿದೆ, ಶೀಘ್ರ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ವಿಶ್ವೇಶ್ವರಯ್ಯ ಜಲ ನಿಗಮವು ಯೋಜನಾವಾರು ಅನುದಾನ ಹಂಚಿಕೆ ಮಾಡಿ ಸರ್ಕಾರದ ಅನುಮೋದನೆಗಾಗಿ ಕ್ರಿಯಾಯೋಜನೆ ಸಿದ್ದ ಪಡಿಸಿದೆ, ಈ ಯೋಜನೆಯಲ್ಲಿ ಸುಮಾರು ರೂ. 25 ಕೋಟಿ ಆಗಿದ್ದು, ಇದರಲ್ಲಿ ಕಡೂರು, ಹೊಸದುರ್ಗ, ಚಿಕ್ಕನಾಯಕನಹಳ್ಳಿ ಮೂರು ಶಾಸಕರುಗಳ ಪ್ರಯತ್ನ ಎಂದರು.
ತಾಲೂಕಿನ 32 ಕೆರೆಗಳಿಗೆ ನೀರು ಹರಿಸುವ ಯೋಜನೆಯಾದ ಭದ್ರಾ ಮೇಲ್ದಂಡೆ ಕಾಮಗಾರಿಯು ಅಂದಾಜು ರೂ. 175 ಕೋಟಿ ವೆಚ್ಚದ ಕಾಮಗಾರಿಗೆ ಇನ್ನೂ 15 ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಪ್ರಾರಂಬವಾಗಲಿದೆ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಈಗಾಗಲೇ 67 ಕಿ.ಮೀ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ. ಟೆಂಡರ್ ಪ್ರಕ್ರಿಯೆ ನಂತರ ಅಂದರೆ ಆಗಷ್ಟ್ ಅಥವಾ ಸೆಪ್ಟಂಬರ್ ತಿಂಗಳಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಹೇಳಿದರು.
ತಾವು ನಡೆಸುತ್ತಿರುವ ಪಾದಯಾತ್ರೆಗೆ ಒಂದು ವಾರ ಮುಗಿದಿದ್ದು, ಸುಮಾರು 250 ಕಿ.ಮೀ ಪಾದಯಾತ್ರೆ ಮುಗಿಸಲಾಗಿದೆ, ಉಳಿದ ಮೂರು ವಾರಗಳಲ್ಲಿ 750 ಕಿ.ಮೀ ಪಾದಯಾತ್ರೆ ಮುಗಿಯಲಿದೆ. ಪಾದಯಾತ್ರೆಯಿಂದ ತಮಗೆ ತೃಪ್ತಿ ತಂದಿದೆ. ತಮ್ಮ ಈ ಪಾದಯಾತ್ರೆ ಬಗ್ಗೆ ವಿಪಕ್ಷದವರು ಟೀಕಿಸುತ್ತಿದ್ದು, ತಾವು ಯಾವುದನ್ನು ಲೆಕ್ಕಿಸುವುದಿಲ್ಲ. ಈ ಪಾದಯಾತ್ರೆಯು ಯಾವುದೇ ಗಿಮಿಕ್ ಅಲ್ಲ. ರೈತರಿಗೆ ಆತ್ಮಸ್ಥರ್ಯ ತುಂಬುವ ಉದ್ದೇಶ ಮತ್ತು ಅಭಿವೃದ್ದಿ ಕಾಮಗಾರಿಗಳನ್ನು ವೀಕ್ಷಿಸುವುದು ಅಷ್ಟೇ ಎಂದು ಹೇಳಿದರು.
ಈ ಸಂದರ್ಭ ಪಕ್ಷದ ಮುಖಂಡರಾದ ಭಂಡಾರಿಶ್ರೀನಿವಾಸ್, ಕೆ.ಎಸ್. ರಮೇಶ್, ಕೆ.ಹೆಚ್. ಲಕ್ಕಣ್ಣ, ಸೀಗೇಹಡ್ಲು ಹರೀಶ್, ಪುಟ್ಟೇಗೌಡ, ರೇವಣಸಿದ್ದಪ್ಪ, ಉಪೇಂದ್ರನಾಥ್, ಸುರತಾಳ್ ಮಂಜುನಾಥ್, ಕೆ.ಸಿ. ದತ್ತಾತ್ರಿ, ಕೃಷ್ಣಮೂರ್ತಿ, ವಿಜಯಕುಮಾರ್ ಉಪಸ್ಥಿತರಿದ್ದರು.