ಬಿಸಿಯೂಟ ನೌಕರರು ಸ್ವಯಂ ಸೇವಕರಲ್ಲ, ಕಾರ್ಮಿಕರು: ಅಮರಜಿತ್ ಕೌರ್
ತುಮಕೂರು, ಜು.02: ದೇಶದ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುತ್ತಿರುವ ಬಿಸಿಯೂಟ ನೌಕರರು ಸರಕಾರ ಹೇಳುವಂತೆ ಸ್ವಯಂ ಸೇವಕರಲ್ಲ, ನಾವು ಕಾರ್ಮಿಕರು, ನಿಮ್ಮ ಗೌರವಧನ ನಮಗೆ ಬೇಕಿಲ್ಲ. ನಮಗೆ ಕನಿಷ್ಠ ವೇತನ ನೀಡಿ, ನಮ್ಮನ್ನು ಸರಕಾರಿ ನೌಕರರೆಂದು ಪರಿಗಣಿಸಿ ಎಂದು ಎಐಟಿಯುಸಿ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಅಮರಜಿತ್ ಕೌರ್ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಒತ್ತಾಯಿಸಿದ್ದಾರೆ.
ನಗರದ ಟೌನ ಹಾಲ್ ಮುಂಭಾಗದಲ್ಲಿ ಎಐಟಿಯುಸಿ ನೇತೃತ್ವದಲ್ಲಿ ನಡೆದ ಬಿಸಿಯೂಟ ನೌಕರರ ಪ್ರಥಮ ರಾಷ್ಟ್ರೀಯ ಸಮ್ಮೇಳನದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು,ನಾವು ಕೇಳುತ್ತಿರುವುದು ಭೀಕ್ಷೆಯಲ್ಲ. ಸಂವಿಧಾನಬದ್ಧವಾದ ನಮ್ಮ ಬೆವರಿನ ಹಕ್ಕು. ನಾವು ಯಾವುದೇ ಧರ್ಮಕಾರ್ಯದಲ್ಲಿ ಕೆಲಸ ಮಾಡುತ್ತಿಲ್ಲ. ಸರಕಾರದ ಯೋಜನೆಯೊಂದರಲ್ಲಿ ದುಡಿಯುತ್ತಿದ್ದೇವೆ. ಆದ್ದರಿಂದ ನಮಗೆ ಸರಕಾರದ ಇತರೆ ನೌಕರರಂತೆ ಎಲ್ಲಾ ರೀತಿಯ ಸವಲತ್ತುಗಳನ್ನು ಪಡೆಯುವ ಹಕ್ಕು ಇದೆ. ಇದನ್ನು ಪಡೆಯಲು ನಾವು ಎಂತಹ ಹೋರಾಟಕ್ಕೂ ಸಿದ್ದ ಎಂದರು.
ಬಿಸಿಯೂಟ ತಯಾರಿಕಾ ಕ್ಷೇತ್ರ ಇಡೀ ವಿಶ್ವದಲ್ಲಿಯೇ ಮಹತ್ವ ಪಡೆದಿದೆ. ಭವಿಷ್ಯದ ಪ್ರಜೆಗಳಾಗಿರುವ ಮಕ್ಕಳಿಗೆ ಸಂವಿಧಾನ ಬದ್ಧವಾಗಿ ನೀಡಬೇಕಿರುವ ಕಡ್ಡಾಯ, ಗುಣಮಟ್ಟದ ಶಿಕ್ಷಣ, ಪೌಷ್ಠಿಕ ಆಹಾರ ಇವುಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ದಿನಕ್ಕೆ 12 ಕೋಟಿ ಮಕ್ಕಳಿಗೆ ಬಿಸಿಯೂಟ ನೀಡುವ ಮೂಲಕ ಅವರ ಶೈಕ್ಷಣಿಕ ಪ್ರಗತಿಯ ಜೊತೆಗೆ, ದೇಶದ ಅರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಯಲ್ಲಿ ಬಿಸಿಯೂಟ ತಯಾರಿಕಾ ನೌಕರರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇಂತಹ ಮಹಿಳಾ ಶಕ್ತಿಯನ್ನು ಅಪಮಾನಿಸುವುದು ಸರಿಯಲ್ಲ. ಸರಕಾರ ಕೂಡಲೇ ಅವರ ಸೇವೆಯನ್ನು ಖಾಯಂಗೊಳಿಸಬೇಕು. ಅಲ್ಲಿಯವರೆಗೆ ಕನಿಷ್ಠ ವೇತನ ಜಾರಿಗೊಳಿಸಬೇಕು.ಯೋಜನೆಯ ಖಾಸಗೀಕರಣಕ್ಕೆ ಅವಕಾಶ ನೀಡಬಾರದು ಎಂದು ಅಮರಜಿತ್ ಕೌರ್ ಆಗ್ರಹಿಸಿದರು.
ಕೇಂದ್ರದಲ್ಲಿರುವ ಉದ್ದಿಮೆದಾರರ ಪರವಾಗಿರುವ ಎನ್.ಡಿ.ಎ.ಸರಕಾರ ಸಾಮಾಜಿಕ ಸೇವಾ ಕಾರ್ಯಗಳ ಅಡಿಯಲ್ಲಿ ಬರುವ ಎಲ್ಲಾ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ರದ್ದು ಪಡಿಸುವ, ಇಲ್ಲವೇ ಖಾಸಗೀಕರಣ ಮಾಡಲು ಹುನ್ನಾರ ನಡೆಸುತ್ತಿದೆ. ಅಂಗನವಾಡಿ, ಆಶಾ, ಬಿಸಿಯೂಟ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಕಾರ್ಮಿಕರನ್ನು ಅತ್ಯಂತ ತುಚ್ಚವಾಗಿ ಕಾಣುತ್ತಿದೆ. ಸೌಲಭ್ಯ ಕೇಳಿದರೆ ಸ್ವಯಂ ಸೇವಕರೆಂದು ಹೇಳುವ ಪ್ರಧಾನಿ ನರೇಂದ್ರ ಮೋದಿ, ನೌಕರರ ನಿವೃತ್ತಿ, ಶಿಸ್ತು ಕ್ರಮಗಳಿಗೆ ಮಾತ್ರ ನೌಕರರ ನಿಯಮಗಳನ್ನು ಅನುಸರಿಸಲಾಗುತ್ತಿದೆ.ಇ ದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ಸವಲತ್ತು ಕೇಳಿದರೆ ಹಣವಿಲ್ಲವೆಂದು ಹೇಳುವ ನಿಮಗೆ ಅದಾನಿ, ಅಂಬಾನಿ, ಇನ್ನಿತರ ಉದ್ದಿಮೆದಾರರ ಸಾವಿರಾರು ಕೋಟಿ ರೂ. ಎನ್.ಪಿ.ಎ ಮನ್ನಾ ಮಾಡಲು ಸಾಧ್ಯವಾಗಿದ್ದು ಹೇಗೆ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕರು ದೇಶದಲ್ಲಿ ಮಹಿಳೆಯರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಜನರ ಮೇಲೆ, ಗೋ ರಕ್ಷಣೆ, ದನದ ಮಾಂಸದ ಹೆಸರಿನಲ್ಲಿ ನಡೆಯುತ್ತಿರುವ ಹೋರಾಟವನ್ನು ಪ್ರಶ್ನಿಸಿದರೆ ನಮ್ಮನ್ನು ದೇಶದ್ರೋಹಿಗಳು, ಐಕ್ಯತೆಯ ವಿರೋಧಿಗಳು ಎಂಬಂತೆ ಬಿಂಬಿಸುತ್ತಿದ್ದೀರಿ. ಧರ್ಮ,ದೇವರ ಹೆಸರಿನಲ್ಲಿ ಕಾರ್ಮಿಕರಲ್ಲಿನ ಐಕ್ಯತೆ ಒಡೆಯಲು ಯತ್ನಿಸುತ್ತಿರುವ ನೀವು ನಿಜವಾದ ದೇಶ ದ್ರೋಹಿಗಳು, ನೋಟು ಅಮಾನ್ಯಕರಣ, ಜಿ.ಎಸ್.ಟಿ. ಯಂತಹ ಯೋಜನೆಗಳ ಮೂಲಕ ಬಡವರು, ಗುಡಿ ಕೈಗಾರಿಕಗಳ ಮೇಲೆ ಗಧಾ ಪ್ರಹಾರ ನಡೆಸಿದ ನೀವುಗಳು ಐಕ್ಯತೆಯ ವಿರೋಧಿಗಳು. ಯಾವುದೇ ಕಾರಣಕ್ಕೂ ಕಾರ್ಮಿಕರಲ್ಲಿ ಐಕ್ಯತೆ ಹಾಳಾಗಲು ಬಿಡುವುದಿಲ್ಲ ಎಂದು ಅಮರಜಿತ್ ಕೌರ್ ತಿಳಿಸಿದರು.
ವೇದಿಕೆಯಲ್ಲಿ ಬಿಸಿಯೂಟ ನೌಕರರ ರಾಷ್ಟ್ರೀಯ ಸಂಚಾಲಕರಾದ ವಿ.ಬಿ.ವಿಜಯಲಕ್ಷ್ಮಿ, ಸಿಪಿಐ ರಾಜ್ಯ ಕಾರ್ಯದರ್ಶಿ ಪಿ.ವಿ.ಲೋಕೇಶ್, ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಹೆಚ್.ವಿ.ಆನಂತ ಸುಬ್ಬರಾವ್ ಮಾತನಾಡಿದರು. ಬಹಿರಂಗ ಸಭೆಯ ಅಧ್ಯಕ್ಷತೆಯನ್ನು ಎಐಟಿಯುಸಿ ಗೌರವಾಧ್ಯಕ್ಷ ಹೆಚ್.ಕೆ.ರಾಮಚಂದ್ರಪ್ಪ,ರಾಜ್ಯ ಕಾರ್ಯದರ್ಶಿ ಎನ್.ಶಿವಣ್ಣ, ಗಿರೀಶ್ ಸ್ಭೆರಿದಂತೆ ಹಲವರು ಉಪಸ್ಥಿತರಿದ್ದರು. ಬಹಿರಂಗಸಭೆಗೂ ಮೊದಲು ನಗರ ಟೌನ್‌ಹಾಲ್ ನಿಂದ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಎಐಟಿಯುಸಿ ಕೆಂಬಾವುಟ ಹಿಡಿದ ಸಾವಿರಾರು ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.