ಪೇಜಾವರ ಶ್ರೀಗಳ ಕ್ರಮ ವಿರೋಧಿಸಿ ಶ್ರೀರಾಮ ಸೇನೆ ಪ್ರತಿಭಟನೆ

Update: 2017-07-02 12:00 GMT

ದಾವಣಗೆರೆ, ಜು.2: ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಮತ್ತು ನಮಾಜ್ ಮಾಡಿದ್ದನ್ನು ಖಂಡಿಸಿ, ಪೇಜಾವರ ಶ್ರೀಗಳ ಕ್ರಮ ವಿರೋಧಿಸಿ ಶ್ರೀರಾಮ ಸೇನೆ ನೇತೃತ್ವದಲ್ಲಿ ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಜಯದೇವ ವೃತ್ತದಲ್ಲಿ ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ, ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ನೇತೃತ್ವದಲ್ಲಿ ಪೇಜಾವರ ಶ್ರೀಗಳ ವಿರುದ್ಧ ಘೋಷಣೆ ಕೂಗುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಗಂಗಾಧರ ಕುಲಕರ್ಣಿ, ಕಳೆದ ದಿ. 24ರಂದು ಪೇಜಾವರ ಶ್ರೀಗಳ ನೇತೃತ್ವದಲ್ಲಿ ಉಡುಪಿಯ ಶ್ರೀಕೃಷ್ಣ ಮಠದ ಪವಿತ್ರ ಪರಿಸರದಲ್ಲಿ ಇಫ್ತಾರ್ ಕೂಟ ಹಾಗೂ ನಮಾಜ್ ಮಾಡಿಸಿದ್ದು ಸಮಸ್ತ ಹಿಂದುಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ ಎಂದ ಅವರು, ಹತ್ತಾರು ವರ್ಷಗಳಿಂದಲೂ ಹಿಂದುತ್ವದ ಮುಂಚೂಣಿ ನಾಯಕರಾಗಿ, ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದ ಪೇಜಾವರ ಶ್ರೀಗಳ ಈ ನಿಲುವು ಅತ್ಯಂತ ಖಂಡನೀಯ. ಸೌಹಾರ್ದ ಹಿಂದುಗಳಿಗೆ ಮಾತ್ರವಾ, ಸ್ವಾತಂತ್ರ್ಯ ಬಂದಾಗಿನಿಂದಲೂ ಸೌಹಾರ್ದತೆಗೆ ಎಷ್ಟೇ ಪ್ರಯತ್ನಿಸಿದರೂ ಆ ಸಮುದಾಯ ಇಂಚು ಕೂಡ ಆಚೆ, ಈಚೆಗೆ ಆಗದಿದ್ದಾಗ ಹಿಂದುಗಳಿಗೇಕೆ ಸೌಹಾರ್ದತೆಯ ಪಾಠ ಎಂದು ಅವರು ಪ್ರಶ್ನಿಸಿದರು.


ಕಾಶ್ಮೀರದಲ್ಲಿ ಲಕ್ಷಾಂತರ ಹಿಂದುಗಳನ್ನು ಹೊರ ದಬ್ಬಿ, ಆ ಎಲ್ಲರ ಮೇಲೂ ದೌರ್ಜನ್ಯ ಎಸಗಿದ್ದರೂ ಇನ್ನೂ ಸೌಹಾರ್ದ ಬೇಕೆ? ಈ ಎಲ್ಲಾ ಅಂಶ ಗಮನಿಸಿಯಾದರೂ ಪೇಜಾವರ ಶ್ರೀಗಳು ಸೌಹಾರ್ದತೆ ಹೆಸರಿನಲ್ಲಿ ಈ ಇಫ್ತಾರ್  ಕೂಟ ತಿರಸ್ಕರಿಬೇಕಿತ್ತು. ಆದರೆ, ಪವಿತ್ರ ಶ್ರೀಕೃಷ್ಣ ಮಠದ ಆವರಣದಲ್ಲಿ ಮೂರ್ತಿ ಪೂಜೆ ವಿರೋಧಿಸುವವರಿಗೆ ನಮಾಜ್, ಇಫ್ತಾರ್  ಕೂಟಕ್ಕೆ ಅವಕಾಶ ನೀಡಿದ್ದು, ನಮಾಜ್ ವೇಳೆ ಅಲ್ಲಾ ಒಬ್ಬನೇ ದೇವರೆಂದಿದ್ದು, ಶ್ರೀಕೃಷ್ಣನಿಗೆ ಅವಮಾನವಲ್ಲವೇ ಎಂಬುದಕ್ಕೆ ಶ್ರೀಗಳು ಉತ್ತರಿಸಲಿ ಎಂದು ಅವರು ಒತ್ತಾಯಿಸಿದರು.

ಹಿಂದುಗಳ ಪವಿತ್ರ, ಪುಣ್ಯ ಕ್ಷೇತ್ರದಲ್ಲಿ ಇಂತಹ ಶಾಸ ವಿರೋಧಿ, ಧರ್ಮ ವಿರೋಧಿ, ಹಿಂದು ವಿರೋಧಿ ಆಚರಣೆಗಳಿಗೆ ನಡೆಯಬಾರದೆಂದು ಎಚ್ಚರಿಸಲು ರಾಜ್ಯಾದ್ಯಂತ ಇಂತಹದ್ದೊಂದು ಹೋರಾಟ ಶ್ರೀರಾಮ ಸೇನೆ ಹಮ್ಮಿಕೊಂಡಿದ್ದು, ಇಂತಹ ಯಾವುದೇ ಧರ್ಮ ವಿರೋಧಿ ಘಟನೆ ನಡೆದರೆ ತಮ್ಮ ಸಂಘಟನೆ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಆನಂದ ಜ್ಯೋತಿ, ಬಿ. ರಾಜೇಶ, ಕರಾಟೆ ಮಾಸ್ಟರ್ ವಿ.ಪಿ. ರಮೇಶ, ಬಿ.ಜಿ. ರಾಹುಲ್, ವಿ. ಶ್ರೀಧರ್, ಆರ್. ರಮೇಶ ಮತ್ತಿತರರಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News