ಭ್ರಷ್ಟ ಅಧಿಕಾರಿ ವಿರುದ್ಧ ಕ್ರಮಕ್ಕೆ ಹಿಂದೇಟು ಆರೋಪ: ಸಚಿವ ಶರಣಪ್ರಕಾಶ್ ಪಾಟೀಲ್ ವಿರುದ್ಧ ಲೋಕಾಕ್ಕೆ ದೂರು

Update: 2017-07-02 12:09 GMT

ಮಂಡ್ಯ, ಜು.2: ಭ್ರಷ್ಟಾಚಾರ, ಅವ್ಯವಹಾರ ಆರೋಪ ಎದುರಿಸುತ್ತಿರುವ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) ಮತ್ತು ಬೋಧಕ ಆಸ್ಪತ್ರೆಯ ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ.ಹನುಮಂತ ಪ್ರಸಾದ್ ಅವರ ವಿರುದ್ಧ ಕ್ರಮವಹಿಸದಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮತ್ತು ಇತರೆ ಐದು ಮಂದಿ ಅಧಿಕಾರಿಗಳ ವಿರುದ್ಧ ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.

ಮದ್ದೂರು ತಾಲೂಕು ಸಾದೊಳಲು ಗ್ರಾಮದ ಎಸ್.ಅನುಸತೀಶ್, ಜುಲೈ 1 ರಂದು (ಕೇಸ್ ನಂ.ಸಿಒಎಂಪಿಟಿ/ಎಲ್‌ಒಕೆ/ಎಂವೈಎಸ್/1815/2017) ಸಚಿವ ಡಾಶರಣಪ್ರಕಾಶ್ ಪಾಟೀಲ್, ಅಂದಿನ ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಲಕ್ಷ್ಮಿನಾರಾಯಣ್, ಪ್ರಭಾರ ಕಾರ್ಯದರ್ಶಿ ಜಾವಿದ್ ಅಖ್ತರ್, ಮಿಮ್ಸ್ ನಿರ್ದೇಶಕರು ಡಾ.ಪುಷ್ಪಾ ಸರ್ಕಾರ್, ಮಿಮ್ಸ್ ಪ್ರಭಾರ ವೈದ್ಯಕೀಯ ನಿರ್ದೇಶಕ ಡಾ.ರವಿಕುಮಾರ್, ಮಿಮ್ಸ್ ಮುಖ್ಯ ಆಡಳಿತಾಧಿಕಾರಿ ಜಯ ವಿರುದ್ಧ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪವೆಸಗಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾರೆ.

ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿಗಳ ಸೂಚನೆಯನ್ನು ಕರ್ನಾಟಕ ಸರಕಾರದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮತ್ತು ಇಲಾಖೆಗೆ ಸಂಬಂಧಿಸಿದ ಮೇಲಾಧಿಕಾರಿಗಳು ನಿರ್ಲಕ್ಷಿಸುವ ಮೂಲಕ ಭ್ರಷ್ಟ ಅಧಿಕಾರಿ ಡಾ.ಹನುಮಂತ ಪ್ರಸಾದ್ ಮುಂದುವರಿಕೆಗೆ ಸಹಕರಿಸುತ್ತಿದ್ದಾರೆ ಎಂದು ಅನುಸತೀಶ್ ದೂರಿನಲ್ಲಿ ಆರೋಪಿಸಿದ್ದಾರೆ.


ಭ್ರಷ್ಟ ಅಧಿಕಾರಿ ವಿರುದ್ಧ ಕಾನೂನು ಕ್ರಮ ಜರುಗಿಸಲು ವೈದ್ಯಕೀಯ ಶಿಕ್ಷಣ ಸಚಿವರು ಮುಂದಾಗದಿರುವುದು ಅನುಮಾನಕ್ಕೆಡೆ ಮಾಡಿದೆ. ಅಂದರೆ, ಸಚಿವರು ಪರೋಕ್ಷವಾಗಿ  ಡಾ.ಹನುಮಂತ ಪ್ರಸಾದ್ ಭ್ರಷ್ಟತೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಸಂಶಯವಿದೆ. ಆದ್ದರಿಂದ ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡುವಂತೆ ಅವರು ಲೋಕಾಯುಕ್ತ ನ್ಯಾಯಮೂರ್ತಿಗಳಲ್ಲಿ ಮನವಿ ಮಾಡಿದ್ದಾರೆ.

ಡಾ.ಹನುಮಂತ ಪ್ರಸಾದ್ ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ರಿಜಿಸ್ಟ್ರಾರ್ ಆಗಿದ್ದಾಗ 2006ರ ವೈದ್ಯ ವಿದ್ಯಾರ್ಥಿಗಳ ಸ್ನಾತಕೋತ್ತರ ಪ್ರವೇಶ ಪರೀಕ್ಷೆ (2006 ಪಿಜಿಇಟಿ) ಅಕ್ರಮದಲ್ಲಿ ಭಾಗಿಯಾಗಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆಯುತ್ತಿದೆ. ಇಂತಹ ವ್ಯಕ್ತಿಯನ್ನು ಮಿಮ್ಸ್ ಪ್ರಭಾರ ವೈದ್ಯಕೀಯ ಹುದ್ದೆಗೆ ನೇಮಿಸಿರುವುದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News