ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮುಂದುವರಿದ ರೈತರ ಪ್ರತಿಭಟನೆ; ಹೆದ್ದಾರಿ ತಡೆ

Update: 2017-07-02 12:13 GMT

ಮಂಡ್ಯ, ಜು.2: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಜಿಲ್ಲೆಯಲ್ಲಿ ಭುಗಿಲ್ಲೆದ್ದಿರುವ ರೈತರ ಪ್ರತಿಭಟನೆ, ಮೂರನೇ ದಿನವಾದ ರವಿವಾರವೂ ಮುಂದುವರಿಯಿತು.

ತಾಲೂಕಿನ ಇಂಡುವಾಳು ಹಾಗೂ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರಸ್ತೆತಡೆ ನಡೆಸಿದ ರೈತರು, ಕೂಡಲೇ ನದಿಗೆ ನೀರು ಹರಿಸುವುದನ್ನು ನಿಲ್ಲಿಸಲು ಆಗ್ರಹಿಸಿದರು.

ಇಂಡುವಾಳು ಬಳಿ ರೈತಸಂಘದ ಮೂಲ ಸಂಘಟನೆಯ ಕಾರ್ಯಕರ್ತರು ರಸ್ತೆತಡೆ ನಡೆಸಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯುಂಟಾಯಿತು. ಸ್ಥಳಕ್ಕಾಗಮಿಸಿದ ಪೊಲೀಸರು ರೈತರ ಮನವೊಲಿಸಿ ಸಂಚಾರ ಸುಗಮಗೊಳಿಸಿದರು. ಕೆಆರ್‌ಎಸ್‌ಗೆ ಸ್ವಲ್ಪವೇ ಪ್ರಮಾಣದ ನೀರು ಹರಿದುಬರುತ್ತಿದ್ದು, ನೀರನ್ನು ಸಂಗ್ರಹಿಸದೇ ತಮಿಳುನಾಡಿಗೆ ಹರಿಸಲಾಗುತ್ತಿದೆ. ಆ ಮೂಲಕ ಸರಕಾರ ಜಿಲ್ಲೆ ಮತ್ತು ನಾಡಿನ ರೈತರ ಹಿತವನ್ನು ಬಲಿಕೊಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಜಿಲ್ಲೆಯ ಕೆರೆಕಟ್ಟೆಗಳು ಬತ್ತಿಹೋಗಿವೆ, ಕೊಳವೆಬಾವಿಗಳಲ್ಲಿ ನೀರು ಬರುತ್ತಿಲ್ಲ. ಸರಕಾರಕ್ಕೆ ಕಾಳಜಿಯಿದ್ದರೆ, ಕೂಡಲೇ ನಾಲೆಗಳ ಮೂಲಕ ನೀರುಹರಿಸಿ ಕೆರೆಕಟ್ಟೆಗಳನ್ನು ತುಂಬಿಸಬೇಕು. ತಮಿಳುನಾಡಿಗೆ ನೀರು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು. ಸರಕಾರದ ಧೋರಣೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ರೈತರ ತಾಳ್ಮೆಯನ್ನು ಕೆಣಕಬೇಡಿ. ತಮಿಳುನಾಡಿಗೆ ಹರಿಯುತ್ತಿರುವ ನೀರನ್ನು ನಿಲ್ಲಿಸಿ. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ಎಚ್.ಚಂದ್ರಶೇಖರ್, ಸುಧೀರ್‌ಕುಮಾರ್, ತಿಮ್ಮೇಗೌಡ, ಉಮಾಶಂಕರ್, ಇಂಡುವಾಳು ಬಸವರಾಜು, ಆರ್.ನಾಗರಾಜು, ತಿಮ್ಮಯ್ಯ, ಕಾಳೇಗೌಡ, ಚಾಮೇಗೌಡ, ಮಹೇಶ್ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News