×
Ad

ಓದಿದ್ದು 7 ನೇ ಕ್ಲಾಸ್ ಆದರೆ ವಂಚನೆ ಮಾತ್ರ ಹೈಟೆಕ್ !

Update: 2017-07-02 18:24 IST

ಶಿವಮೊಗ್ಗ, ಜು. 2: ಈತ ಓದಿದ್ದು 7 ನೇ ಕ್ಲಾಸ್. ಮಾಡುತ್ತಿದ್ದುದು ಗಾರೆ ಕೆಲಸ. ಆದರೆ ಈತನ ವಂಚನಾ ಕೃತ್ಯ ಮಾತ್ರ ಯಾವುದೇ ಹೈಟೆಕ್ ಚೋರರಿಗೂ ಕಡಿಮೆಯಿಲ್ಲ. ಆರೋಪಿಯ ವಂಚನಾ ತಂತ್ರಕ್ಕೆ ಸ್ವತಃ ಪೊಲೀಸರೇ ಆಶ್ಚರ್ಯಪಡುವಂತಾಗಿದೆ.

ನಾಗರಿಕರನ್ನು ಯಾಮಾರಿಸಿ ಬೈಕ್ ಅಪಹರಿಸುತ್ತಿದ್ದ ಆರೋಪದ ಮೇರೆಗೆ ಶಿವಮೊಗ್ಗದ ವಿನೋಬನಗರ ಠಾಣೆ ಪೊಲೀಸರು ವೆಂಕಟೇಶ್ (25) ಎಂಬ ಹೈಟೆಕ್ ವಂಚಕನನ್ನು ಬಂಧಿಸಿದ್ದಾರೆ.

'ಒಎಲ್‍ಎಕ್ಸ್ ಆ್ಯಪ್'ನಲ್ಲಿ ಮಾರಾಟಕ್ಕಿಟ್ಟಿರುವ ಬೈಕ್ ಮಾಲೀಕರ ವಿವರವನ್ನು ವೆಂಕಟೇಶ್ ಸಂಗ್ರಹಿಸುತ್ತಿದ್ದ. ಬೈಕ್ ಮಾಲೀಕರ ಮೊಬೈಲ್‍ಗೆ ಫೋನ್ ಮಾಡಿ ಖರೀದಿದಾರರ ಸೋಗಿನಲ್ಲಿ ಅವರಿದ್ದ ಸ್ಥಳಕ್ಕೆ ತೆರಳುತ್ತಿದ್ದ. ತದನಂತರ ಬೈಕ್ ಸ್ಥಿತಿ ಹೇಗಿದೆ ಎಂಬುವುದನ್ನು ಪರೀಕ್ಷೆ ಮಾಡಬೇಕೆಂದು ಹೇಳಿ, ಒಂದಿಷ್ಟು ದೂರ ಟ್ರಯಲ್ ಹೋಗಿ ಬರುತ್ತೆನೆ ಎಂದು ಮಾಲೀಕರನ್ನು ನಂಬಿಸಿ ಬೈಕ್ ಕೊಂಡೊಯ್ಯುತ್ತಿದ್ದ. ನಂತರ ಬೈಕ್‍ನೊಂದಿಗೆ ಪರಾರಿಯಾಗುತ್ತಿದ್ದ.

ಈ ಬೈಕ್‍ನ ನಂಬರ್ ಪ್ಲೇಟ್ ಬದಲಾಯಿಸುತ್ತಿದ್ದ. ಬೇರೆಲ್ಲೊ ಕಳವು ಮಾಡುತ್ತಿದ್ದ ಆರ್.ಸಿ. ಬುಕ್ ನಂಬರ್ ಹಾಕುತ್ತಿದ್ದ. ನಕಲಿ ದಾಖಲೆ ಸೃಷ್ಟಿಸುತ್ತಿದ್ದ. ನಂತರ ಈ ಬೈಕ್‍ನ್ನು 'ವ್ಯಾಟ್ಸಾಪ್' ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕವೇ ಖರೀದಿದಾರರನ್ನು ಹುಡುಕಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳುತ್ತಾರೆ.

ಕೆಲವೊಮ್ಮೆ ಕಳವು ಮಾಡಿದ್ದ ಬೈಕ್‍ಗಳನ್ನು ದುಬಾರಿ ಮೊಬೈಲ್ ಫೋನ್‍ಗಳಿಗೆ ಬದಲಾವಣೆ ಮಾಡುತ್ತಿದ್ದ. ಮೊಬೈಲ್ ಫೋನ್‍ಗಳನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದ. ಈತನ ಫೇಸ್‍ಬುಕ್ ಅಕೌಂಟ್‍ನಲ್ಲಿ ಬೇರೊಬ್ಬರ ಫೋಟೋ ಅಪ್‍ಲೋಡ್ ಮಾಡಿದ್ದಾನೆ.

ದೂರು ದಾಖಲು: ಇತ್ತೀಚೆಗೆ ವಿನೋಬನಗರ ಹಾಗೂ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಎರಡು ಪ್ರತ್ಯೇಕ ವಂಚನೆಯ ದೂರುಗಳು ದಾಖಲಾಗಿದ್ದವು. ಎರಡು ಪ್ರಕರಣಗಳೂ 'ಒಎಲ್‍ಎಕ್ಸ್ ಆ್ಯಪ್'ನಲ್ಲಿ ಮಾರಾಟಕ್ಕಿಟ್ಟಿರುವ ಬೈಕ್ ಮಾಲೀಕರಿಗೆ ಸಂಬಂಧಿಸಿದ್ದಾಗಿತ್ತು. ಖರೀದಿಗೆಂದು ಆಗಮಿಸಿದ್ದ ಯುವಕನೋರ್ವ ಟ್ರಯಲ್ ನೋಡುವುದಾಗಿ ಹೇಳಿ ಬೈಕ್‍ನೊಂದಿಗೆ ಪರಾರಿಯಾಗಿದ್ದಾನೆ ಎಂದು ದೂರುದಾರರು ತಿಳಿಸಿದ್ದರು.

ವಂಚನಾ ಕೃತ್ಯದ ಸಾಮ್ಯತೆ ಒಂದೇ ರೀತಿಯಲ್ಲಿರುವುದನ್ನು ಗಮನಿಸಿದ ಪೊಲೀಸರು ಎರಡೂ ಪ್ರಕರಣಗಳಲ್ಲಿಯೂ ಓರ್ವನೇ ವಂಚಕ ಭಾಗಿಯಾಗಿರುವುದನ್ನು ಖಚಿತಪಡಿಸಿಕೊಂಡು, ಆರೋಪಿಯ ಶೋಧ ಕಾರ್ಯಾಚರಣೆಗಿಳಿದಿದ್ದಾರೆ. ಆತ ಉಪಯೋಗಿಸಿದ್ದ ಮೊಬೈಲ್ ಪೋನ್ ನಂಬರ್ ಮೂಲಕ ಆತನ ಜಾಡು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ. ಎರಡು ಬೈಕ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ್, ಸಬ್ ಇನ್ಸ್‍ಪೆಕ್ಟರ್ ರಾಘವೇಂದ್ರ ಕಾಂಡಿಕೆ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News