×
Ad

ಪ್ರಜೆಗಳ ಹಕ್ಕು ಕಾಪಾಡುವಲ್ಲಿ ನ್ಯಾಯಾಂಗ ಮಹತ್ವದ ಪಾತ್ರ ವಹಿಸಿದೆ

Update: 2017-07-02 18:34 IST

ತುಮಕೂರು,ಜು.02: ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ರಾಷ್ಟ್ರಗಳಲ್ಲಿ ಪ್ರಜೆಗಳ ಹಕ್ಕುಗಳನ್ನು ಸಂರಕ್ಷಿಸುವಲ್ಲಿ ನ್ಯಾಯಾಂಗ ತನ್ನದೇ ಆದ ಮಹತ್ವ ಹೊಂದಿದೆ. ಬಲಾಢ್ಯರಿಂದ ಅಶಕ್ತರ ಹಕ್ಕುಗಳನ್ನು ಸದಾ ಕಾಪಾಡುತ್ತಾ ಬಂದಿದೆ ಎಂದು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಜಯಂತ್ ಪಟೇಲ್ ತಿಳಿಸಿದ್ದಾರೆ.

ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ಮೂರನೇ ಹಂತದ ಜಿಲ್ಲಾ ನ್ಯಾಯಾಲಯ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಸಮಾಜದಲ್ಲಿ ಬಲಾಢ್ಯರಿಂದ, ಅಧಿಕಾರವಂತರಿಂದ ಪ್ರಜೆಗಳ ಹಕ್ಕನ್ನು ಕಸಿಯಲಾಗದು. ಎಲ್ಲ ಪ್ರಜೆಗಳ ಹಕ್ಕುಗಳ ಸಂರಕ್ಷಕನಾಗಿ ನ್ಯಾಯಾಂಗ ಕಾರ್ಯನಿರ್ವಹಿಸುತ್ತಿದೆ. ಕಾನೂನು ಮೇಲುಗೈ ಪಡೆಯಬೇಕೇ ಹೊರತು, ಜನ ಬಲ, ತೊಳ್ಬಲ, ಅಧಿಕಾರ ಬಲವಲ್ಲ ಎಂದರು.

ನ್ಯಾಯಾಂಗದಲ್ಲಿ ಕಾರ್ಯನಿರ್ವಹಿಸುವವರಿಗೆ ಮೂರು ಪ್ರಮುಖ ಲಕ್ಷಣಗಳು ಇರಬೇಕು. ಅದರಲ್ಲಿ ಮೊದಲನೆಯದು ಸ್ಪಷ್ಟ ನೋಟ. ಕಾನೂನಿನ ಜ್ಞಾನದೊಂದಿಗೆ ಸಾಮಾಜಿಕ ಹಿನ್ನೆಲೆಯ ಜ್ಞಾನವೂ ಇರಬೇಕು. ಇಂತಹ ದೃಷ್ಟಿಕೋನ ಇದ್ದಾಗ ಉತ್ತಮ ಕಾರ್ಯ ಮತ್ತು ನಿರ್ಣಯ ಕೈಗೊಳ್ಳಲು ಸಾಧ್ಯವಾಗುತ್ತದೆ. ಎರಡನೆಯದು ಜಾಣತನ ಅಥವಾ ವಿವೇಕ. ವಿವೇಕದ ಜ್ಞಾನವಿದ್ದರೆ ಯಾವುದೇ ಒಂದು ಪ್ರಕರಣ ಎದುರಾದಾಗ ಅದನ್ನು ಹೇಗೆ ನಿಭಾಯಿಸಬೇಕು ಎಂಬ ಶಕ್ತಿ ಬರುತ್ತದೆ. ಮೂರನೆಯದು ಸಾಮರ್ಥ್ಯ ಅಥವಾ ಧೈರ್ಯ. ಕಾನೂನನ್ನು ಎತ್ತಿಹಿಡಿಯಬೇಕಾದ ಸಂದರ್ಭ ಬಂದಾಗ ಗೊಂದಲಕ್ಕೆ ಒಳಗಾಗುವ ಅವಕಾಶಗಳಿರುತ್ತವೆ. ಅಂತಹ ಸಂದರ್ಭದಲ್ಲಿ ಧೈರ್ಯ ಮತ್ತು ಸಾಮರ್ಥ್ಯವಿದ್ದರೆ ಎಂತಹುದೇ ಪ್ರಕರಣ ಬಂದರೂ ಅದನ್ನು ಸ್ವ ಸಾಮರ್ಥ್ಯದಿಂದ ನಿಭಾಯಿಸಬಹುದು ಎಂದು ನ್ಯಾ. ಜಯಂತ್ ಪಟೇಲ್ ನುಡಿದರು.

ನ್ಯಾಯಾಂಗದಿಂದ ಜನತೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಜನತೆಯ ನಿರೀಕ್ಷೆಯನ್ನು ಹುಸಿ ಮಾಡಬಾರದು. ಸಂವಿಧಾನದತ್ತವಾಗಿ ಇರುವ ಅಧಿಕಾರ ಚಲಾಯಿಸಿ ಕಾನೂನಿನ ಪರಿದಿಯೊಳಗೆ ಎಲ್ಲರೂ ಕೆಲಸ ಮಾಡಬೇಕು. ತುಮಕೂರಿನಲ್ಲಿ ಇರುವ ನ್ಯಾಯಾಲಯ ಸಂಕೀರ್ಣ ಅತ್ಯಂತ ಉತ್ತಮ ಕಟ್ಟಡವಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ಉತ್ತಮ ಕಟ್ಟಡ ನಿರ್ಮಾಣವಾಗಿರುವುದನ್ನು ಕಾಣಬಹುದಾಗಿದೆ. ಇದು ವಕೀಲರಿಗೆ, ನ್ಯಾಯಾಧೀಶರಿಗೆ, ಕಕ್ಷಿದಾರರಿಗೆ ಎಲ್ಲರಿಗೂ ಲಭ್ಯವಾಗುವಂತಾಗಬೇಕು. ಕಟ್ಟಡ ಕೇವಲ ಕಟ್ಟಡವಾಗಬಾರದು. ಅದು ಜ್ಞಾನ ಮಂದಿರವಾಗಬೇಕು. ಎಲ್ಲರಿಗೂ ಕಟ್ಟಡದ ಸೌಲಭ್ಯ ಸಿಗಬೇಕು ಎಂದು ಸಲಹೆ ನೀಡಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಂದ್ರ ಬಾದಾಮಿಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News