ಸರೋಜಿನಿ ಮಹಿಷಿ ವರದಿಯನ್ವಯ ಕನ್ನಡಿಗರಿಗೆ ಆದ್ಯತೆ ನೀಡಬೇಕು: ಪ್ರೊ.ಕೆ.ಮರುಳಸಿದ್ದಪ್ಪ ಒತ್ತಾಯ
ಮಂಡ್ಯ, ಜು.2: ಡಾ.ಸರೋಜಿನಿ ಮಹಿಷಿ ವರದಿಯನ್ವಯ ರಾಜ್ಯದಲ್ಲಿ ಕನ್ನಡ ಭಾಷೆ ಹಾಗೂ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಚಿಂತಕ ಪ್ರೊ.ಕೆ.ಮರಳುಸಿದ್ದಪ್ಪ ಒತ್ತಾಯಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ಕನ್ನಡ ಸೇನೆ ವತಿಯಿಂದ ನಗರದ ಗಾಂಧಿಭವನದಲ್ಲಿ ರವಿವಾರ ನಡೆದ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿ-ಒಂದು ಮುಕ್ತ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕನಿಷ್ಠ 15 ವರ್ಷಗಳಿಂದ ವಾಸವಿರುವ, ಕನ್ನಡ ಭಾಷೆ ಮಾತನಾಡುವ ಮತ್ತು ಬರೆಯುವವರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು. ಹೊರ ರಾಜ್ಯದವರಿಗೆ ರಾಜ್ಯದ ಆಸ್ತಿ ಮಾರಾಟ ನಿಷೇಧಿಸಬೇಕು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕನ್ನಡ ಭಾಷೆಯು ಕಡ್ಡಾಯವಾಗಬೇಕು. ಖಾಸಗಿ ಹಾಗೂ ಸರಕಾರಿ ಶಿಕ್ಷಣ ಸಂಸ್ಥೆ, ಕಚೇರಿಗಳಲ್ಲಿ, ಐಟಿಬಿಟಿ ಕಂಪನಿಯ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಬೇಕು ಎಂದು ಅವರು ತಾಕೀತು ಮಾಡಿದರು.
ಭಾಷೆ ವಿಚಾರದಲ್ಲಿ ಕೇಂದ್ರಕ್ಕೆ ಹೆಚ್ಚಿನ ಅಧಿಕಾರವನ್ನು ಸಂವಿಧಾನದಲ್ಲಿ ಕಲ್ಪಿಸಿರುವುದರಿಂದ ಈ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಬಾಂಧವ್ಯ ಇಲ್ಲದಂತಾಗಿದೆ. ಹಾಗಾಗಿ ಸ್ಥಳೀಯ ಭಾಷೆಗೆ ಮಾನ್ಯತೆ ಸಿಗುತ್ತಿಲ್ಲ ಎಂದು ಮರುಳಸಿದ್ದಪ್ಪ ವಿಷಾದಿಸಿದರು.
ಸಂವಿಧಾನದಲ್ಲಿ ಕೇಂದ್ರಕ್ಕೆ ಕೆಲವು ವಿಶೇಷ ಅಧಿಕಾರವನ್ನು ನೀಡಿರುವುದರಿಂದ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಲವು ವಿಷಯಗಳಲ್ಲಿ ಗೊಂದಲಗಳಿವೆ. ಉತ್ತಮ ಬಾಂಧವ್ಯ ಮತ್ತು ಏಕತೆಯಿಂದ ಸಮಸ್ಯೆಗೆ ಪರಿಹಾರ ಕಾಣಬೇಕಾಗಿದೆ ಎಂದವರು ಅಭಿಪ್ರಾಯಪಟ್ಟರು.
14 ಅಂಶಗಳ ಜಾರಿಗೆ ಶಿಫಾರಸು:
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕೆ.ಮುರುಳೀಧರ ಮಾತನಾಡಿ, ಡಾ.ಸರೋಜಿನಿ ಮಹಿಷಿ ವರದಿಯಂತೆ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಲು ಕಾಯ್ದೆ ರೂಪಿಸುವುದು ಸೇರಿದಂತೆ 14 ಅಂಶಗಳನ್ನು ಅನುಷ್ಠಾನಗೊಳಿಸುವಂತೆ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದರು.
ಖಾಸಗಿ ಹಾಗೂ ಸರಕಾರಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.80ರಷ್ಟು ಮೀಸಲಾತಿ ನೀಡಬೇಕು. ಶೇ.100ರಷ್ಟು ಸಿ ಮತ್ತು ಡಿ ದರ್ಜೆಯ ಹುದ್ದೆಗಳು ಕನ್ನಡಿಗರಿಗೆ ಸಿಗಬೇಕು. ತಂತ್ರಜ್ಞಾನ ಕ್ಷೇತ್ರದಲ್ಲೂ ಕನ್ನಡ ಭಾಷೆ ಅಳವಡಿಕೆಯಾಗಬೇಕು. ಜಾಹೀರಾತು, ನಾಮಫಲಕ, ಖಾಸಗಿ ಕಂಪನಿ, ಸರಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಕನ್ನಡ ಕಡ್ಡಾಯಗೊಳಿಸುವಂತೆ ಶಿಫಾರಸು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸೇನೆಯ ಜಿಲ್ಲಾಧ್ಯಕ್ಷ ಎಚ್.ಪಿ.ಮಂಜುನಾಥ್, ಕಸಾಪ ಜಿಲ್ಲಾಧ್ಯಕ್ಷ ಸಿ.ಕೆ.ರವಿಕುಮಾರ್ ಚಾಮಲಾಪುರ, ಕಾರ್ಮಿಕ ಮುಖಂಡರಾದ ಸಿದ್ದಯ್ಯ, ತಿಮ್ಮಯ್ಯ, ಇತರ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.