ಶಿವಮೊಗ್ಗ ಬ್ಯಾರೀಸ್ ಸಿಟಿ ಸೆಂಟರ್ ಗೆ "ಕ್ರೆಡೈ ಕೇರ್ ಅವಾರ್ಡ್ 2017"
ಶಿವಮೊಗ್ಗ, ಜು. 3: ಬ್ಯಾರೀಸ್ ಗ್ರೂಪ್ ನ ಇತ್ತೀಚಿನ ಯೋಜನೆ ಶಿವಮೊಗ್ಗದ ಬ್ಯಾರೀಸ್ ಸಿಟಿ ಸೆಂಟರ್ (ಬಿಸಿಸಿ) "ಕ್ರೆಡೈ" ಪ್ರಶಸ್ತಿಗೆ ಪಾತ್ರವಾಗಿದೆ.
ವಾಣಿಜ್ಯ ಸಂಕೀರ್ಣ, ಶಾಪಿಂಗ್ ಕಾಂಪ್ಲೆಕ್ಸ್ ವಿಭಾಗದಲ್ಲಿ ಬ್ಯಾರೀಸ್ ಸಿಟಿ ಸೆಂಟರ್ ಪಡೆದ ಈ ಪ್ರಶಸ್ತಿಯನ್ನು ಇತ್ತೀಚೆಗೆ ಬೆಂಗಳೂರಿನ ಲಲಿತ್ ಅಶೋಕ್ ನಲ್ಲಿ ನಡೆದ ಸಮಾರಂಭದಲ್ಲಿ ಬ್ಯಾರೀಸ್ ಗ್ರೂಪ್ ನ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಸ್ವೀಕರಿಸಿದರು.
ವೇಗವಾಗಿ ಬೆಳೆಯುತ್ತಿರುವ ಶಿವಮೊಗ್ಗಕ್ಕೆ ಅತ್ಯಾಧುನಿಕ ನಗರದ ಮೆರುಗು ನೀಡಿ 'ಶಿವಮೊಗ್ಗದ ಹೊಸ ಮೊಗ' ಎಂಬ ಕೀರ್ತಿಗೆ ಪಾತ್ರವಾದ ಹೊಸ ಹೆಗ್ಗುರುತು ಬಿಸಿಸಿ. ಹಗಡಿನ ಆಕಾರದಲ್ಲಿ ಆಕರ್ಷಕ ವಿನ್ಯಾಸದಲ್ಲಿ ನಿರ್ಮಾಣವಾಗಿರುವ ಈ ಸಂಕೀರ್ಣದಲ್ಲಿ ಪ್ರತಿಷ್ಠಿತ ಬ್ರಾಂಡ್ ಗಳಿದ್ದು, ಶಾಪಿಂಗ್, ವಿರಾಮ ಹಾಗೂ ಮನರಂಜನೆಗೆ ಶಿವಮೊಗ್ಗದ ಆದ್ಯತೆಯ ತಾಣವಾಗಿ ಬೆಳೆದಿದೆ. "ಬಿಸಿಸಿ" ಶಾಪಿಂಗ್ ಪ್ರಿಯರ ನೆಚ್ಚಿನ ತಾಣ ಹಾಗೂ ವ್ಯಾಪಾರಿಗಳ ಪಾಲಿನ ಸ್ವರ್ಗ. ನಾವು ಅಂದುಕೊಂಡಂತೆಯೇ ಅದು ಬೆಳೆದಿದೆ. ಇಂತಹ ವಿಶಿಷ್ಟ ಕಟ್ಟಡವನ್ನು ಪ್ರತಿ ನಗರದಲ್ಲಿ ನಿರ್ಮಿಸುವ ಮೂಲಕ ಜನರಿಗೆ ತಮ್ಮ ಊರಿನಲ್ಲೇ ತಮ್ಮ ಎಲ್ಲ ಅಗತ್ಯಗಳು ನೆರವೇರುವಂತೆ ಹಾಗೂ ಅತ್ಯುತ್ತಮ ಸೇವೆ ಸಿಗುವಂತೆ ಮಾಡುವುದು ನಮ್ಮ ಗುರಿ ಎಂದು ಸೈಯದ್ ಮುಹಮ್ಮದ್ ಬ್ಯಾರಿ ಪ್ರತಿಕ್ರಿಯಿಸಿದ್ದಾರೆ.
ಪರಿಸರ ಸ್ನೇಹಿ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಬ್ಯಾರೀಸ್ ಗ್ರೂಪ್ ರಾಜ್ಯದ ವಿವಿಧೆಡೆ ಹಲವು ಪ್ರಶಸ್ತಿ ಪುರಸ್ಕೃತ ಅತ್ಯಾಧುನಿಕ ವಸತಿ, ವಾಣಿಜ್ಯ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.