ರೈತರಿಗೆ 15 ದಿನದಲ್ಲಿ ಪರಿಹಾರ ಒದಗಿಸದಿದ್ದರೆ ಹೋರಾಟ: ಹೆಚ್.ಡಿ. ರೇವಣ್ಣ ಎಚ್ಚರಿಕೆ

Update: 2017-07-04 13:29 GMT

ಹಾಸನ,ಜು.4: ರೈತರು ಬೆಳೆ ನಷ್ಟವಾಗಿ ಸತ್ತರೂ ಪರವಾಗಿಲ್ಲ ಆದರೇ ಎರಡು ರಾಷ್ಟ್ರೀಯ ಪಕ್ಷಗಳು ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಿದ್ದು, ಇನ್ನು 15 ದಿನಗಳಲ್ಲಿ ಪರಿಹಾರ ಒದಗಿಸದಿದ್ದರೇ ಉಗ್ರ ಹೋರಾಟ ಮಾಡುವುದಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಎಚ್ಚರಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಸತತವಾಗಿ ಭೀಕರ ಬರಗಾಲದಿಂದ ಆಲೂಗೆಡ್ಡೆ, ತೆಂಗು ಅಡಕೆ, ಭತ್ತ ಸೇರಿದಂತೆ ಇತರೆ ಶೇ. 80 ರಷ್ಟು ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು, ಸರ್ಕಾರ ಕೂಡಲೇ ಸೂಕ್ತ ಪರಿಹಾರ ವನ್ನು 15 ದಿನದೊಳಗೆ ನೀಡದಿದ್ದರೆ ಪಕ್ಷದ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ. ಪಂಜಾಬ್‍ನಿಂದ ತರಿಸಿಕೊಳ್ಳಲಾದ 900 ಟನ್ ಆಲೂ ಸಂಪೂರ್ಣ ಕಳಪೆ ಗುಣಮಟ್ಟದ್ದಾಗಿದೆ. ಪ್ರತಿ ಕ್ವಿಂಟಲ್ ಆಲೂ 1200 ರೂ ಪಾವತಿಸಿಕೊಂಡ ಜಿಲ್ಲಾಡಳಿತ ರೈತರನ್ನು ನಷ್ಟಕ್ಕೆ ಎಡೆಮಾಡಿಕೊಟ್ಟಿದೆ. ಆಲೂ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಈ ಕುರಿತು ಸಿಬಿಐ ತನಿಖೆ ನಡೆಸಿದರೆ ಬಹಳಷ್ಟು ಜನ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಜೈಲಿಗೆ ಹೋಗುತ್ತಾರೆ. ದೃಢೀಕೃತ ಆಲೂ ವಿತರಿಸುವುದಾಗಿ ಹೇಳಿದ ಜಿಲ್ಲಾಡಳಿತ ಆ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳಲಿಲ್ಲ. ಪಂಜಾಬ್‍ನ ಜಲಂಧರ್‍ನ ವ್ಯಾಪಾರಿಗಳಿಂದ ಆಲೂ ಖರೀದಿಸಿ ಅದಕ್ಕೆ ದೃಢೀಕೃತ ಆಲೂ ಎಂದು ಹೇಳಿದರು. ಪ್ರತಿ ಕ್ವಿಂಟಲ್‍ಗೆ ಶೇ.50 ರಷ್ಟು ಸಹಾಯಧನ ನೀಡಿದ ಜಿಲ್ಲಾಡಳಿತ ರೈತರಿಂದ 1200 ರೂ. ಪಡೆಯಿತು. ಬೆಲೆ ನಿಗದಿಯಲ್ಲಿ ಆಗಿರುವ ಅವ್ಯವಹಾರ ದೊಡ್ಡದಾಗಿದೆ ಎಂದು ದೂರಿದರು. ರೈತರ ಬಗ್ಗೆ ರಾಷ್ಟ್ರೀಯ ಪಕ್ಷಗಳಿಗೆ ಕಾಳಜಿ ಇಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ ಪದೇ ಜಿಲ್ಲೆಗೆ ಭೇಟಿ ನೀಡುತ್ತಿದ್ದರು ಕೂಡ ಅಧಿಕಾರಿಗಳ ಸಭೆ ನಡೆಸುತ್ತಿಲ್ಲ. ಕೇವಲ ಪಕ್ಷದ ಸಮಾರಂಭಗಳಲ್ಲಿ ಮಾತ್ರ ಭಾಗವಹಿಸುತ್ತಿರುವ ಅವರು ಜಿಲ್ಲೆಯಲ್ಲಿ ಆಗಬೇಕಿರುವ ಪ್ರಗತಿ ಕುರಿತು ಚಿಂತಿಸುತ್ತಿಲ್ಲ. 2018ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳನ್ನು ಅವರೇ ಗೆದ್ದುಕೊಂಡರು ನಮಗೆ ಬೇಸರವಿಲ್ಲ ಆದರೆ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಶಾಸಕ ಹೆಚ್.ಎಸ್. ಪ್ರಕಾಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News