×
Ad

ಮುಖ್ಯಮಂತ್ರಿ ಮೂರು ದಿನದಲ್ಲಿ ಬಹಿರಂಗ ಕ್ಷಮೆ ಕೇಳದಿದ್ದರೆ ಮಾನನಷ್ಟ ಮೊಕದ್ದಮೆ: ಯಡಿಯೂರಪ್ಪ

Update: 2017-07-04 19:46 IST

ಬೆಂಗಳೂರು, ಜು. 4: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ ಹಾಗೂ ತಮ್ಮ ವಿರುದ್ದ ತೀರಾ ಕೀಳಾಗಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೂರು ದಿನಗಳಲ್ಲಿ ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮಶತಾಬ್ದಿ ಅಂಗವಾಗಿ ಬಿಜೆಪಿ ಹಮ್ಮಿಕೊಂಡಿರುವ ವಿಸ್ತಾರಕ ಕಾರ್ಯಕ್ರಮದಲ್ಲಿ ನಗರದ ಸಂಪಂಗಿರಾಮ ನಗರದಲ್ಲಿ ಮನೆ ಮನೆ ಸಂಪರ್ಕ ಅಭಿಯಾನದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದರು.

ದಲಿತರ ಮನೆಯಲ್ಲಿ ತಮಗೆ ಸಿಗುತ್ತಿರುವ ಸ್ವಾಗತದಿಂದ ವಿಚಲಿತಗೊಂಡಿರುವ ಸಿದ್ದರಾಮಯ್ಯನವರು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಾರದೇ ಇದ್ದಿದ್ದರೆ ಯಡಿಯೂರಪ್ಪ ಜೈಲಿನಲ್ಲಿ ಇರುತ್ತಿದ್ದರು ಎಂದು ನನ್ನ ಬಗ್ಗೆ ಮತ್ತು ಅಮಿತ್‌ಶಾ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಅವರು ಮೂರು ದಿನಗಳಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಸಹಾಯ ಕೋರಿದ ವೃದ್ಧೆ: ಸಂಪಂಗಿ ರಾಮನಗರದ ನಾಗರತ್ನಮ್ಮ ಎಂಬ ವೃದ್ಧೆ ಮಕ್ಕಳು ತಮ್ಮನ್ನು ಮನೆಯಿಂದ ಹೊರ ಹಾಕಿದ್ದಾರೆ. ಬೀದಿಯಲ್ಲಿದ್ದೇನೆ, ನೆರವು ನೀಡಿ ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಯಡಿಯೂರಪ್ಪ ಸ್ಥಳೀಯ ಮುಖಂಡರಿಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

ನಮ್ಮ ಮನೆಗೆ ಬನ್ನಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಮನೆ ಮನೆ ಭೇಟಿ ಸಂದರ್ಭದಲ್ಲಿ ಕ್ರಿಶ್ಚಿಯನ್ ಸಮುದಾಯದವರು ನಮ್ಮ ಮನೆಗೆ ಬನ್ನಿ ಎಂದು ಒತ್ತಾಯಿಸಿದ ಘಟನೆ ನಡೆಯಿತು. ಕ್ರೈಸ್ತ ಸಮುದಾಯಕ್ಕೆ ಸೇರಿದ ಜೀವನ್ ಎಂಬ ಬಿಜೆಪಿ ಕಾರ್ಯಕರ್ತ ತಮ್ಮ ಮನೆಗೂ ಬರುವಂತೆ ಘೋಷಣೆಗಳನ್ನು ಕೂಗಿದರು.

ಅಭಿಯಾನದಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಿಬಿಎಂಪಿ ಮಾಜಿ ಸದಸ್ಯ ಗೋಪಿ ಸೇರಿದಂತೆ ಇತರರು ಇದ್ದರು.

ಆತಿಥ್ಯಕ್ಕೆ ದಲಿತರಿಗೆ ಆಹ್ವಾನ

 ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಜನಸಂಪರ್ಕ ಅಭಿಯಾನದ ವೇಳೆ ಉಪಾಹಾರ ಸೇವಿಸಿದ ದಲಿತ ಕುಟುಂಬಗಳಿಗೆ ತಮ್ಮ ಮನೆಯಲ್ಲಿ ಆತಿಥ್ಯ ನೀಡಲು ನಿರ್ಧರಿಸಿದ್ದು, ಸುಮಾರು 63 ದಲಿತ ಹಾಗೂ ಹಿಂದುಳಿದ ವರ್ಗದ ಕುಟುಂಬದವರಿಗೆ ತಮ್ಮ ಮನೆಗೆ ಆತಿಥ್ಯಕ್ಕೆ ಬರುವಂತೆ ಆಹ್ವಾನ ನೀಡಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಕಳೆದ ಮೇ 18 ರಿಂದ ಜೂ.29ರ ವರೆಗೂ ರಾಜ್ಯಾದ್ಯಂತ ಜನಸಂಪರ್ಕ ಅಭಿಯಾನದಡಿ 10,700 ಕಿ.ಮೀ. ರಾಜ್ಯ ಪ್ರವಾಸ ನಡೆಸಿದ್ದರು. ಈ ವೇಳೆ ತಮಗೆ ಅನ್ನ ಹಾಕಿದವರನ್ನು ತಮ್ಮ ಮನೆಗೆ ಕರೆದು ವಿಶೇಷ ಆತಿಥ್ಯ ನೀಡಲು ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News