ಹಲ್ಲೆ, ಕೊಲೆ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ ಆರೋಪ : ಶಾಸಕ ರಮೇಶ್‍ಬಾಬು, ಬೆಂಬಲಿಗರ ವಿರುದ್ಧ ದೂರು
ಮಂಡ್ಯ, ಜು.4: ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ರಾಜಸ್ವ ನಿರೀಕ್ಷಕರೊಬ್ಬರು ಶ್ರೀರಂಗಪಟ್ಟಣದ ಶಾಸಕ ರಮೇಶ್‍ಬಾಬು ಬಂಡಿಸಿದ್ದೇಗೌಡ ಹಾಗೂ ಐದು ಮಂದಿ ಬೆಂಬಲಿಗರ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ರಮೇಶ್‍ಬಾಬು, ಬೆಂಬಲಿಗರಾದ ಬೆಳವಾಡಿ ಗ್ರಾಮದ ನಂದಕುಮಾರ್ ಅಲಿಯಾಸ್ ಸ್ವಾಮಿ, ಗುಂಡಪ್ಪ, ನಂದಕುಮಾರ್ ಸಹಚರರಾದ ಮಂಜು ಅಲಿಯಾಸ್ ಮಂಜುಳ, ಸಿದ್ದೇಶ್ ಹಾಗೂ ಶಿವು ಅವರ ವಿರುದ್ಧ ಶ್ರೀರಂಗಪಟ್ಟಣ ತಾಲೂಕು ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕ (ರೆವಿನ್ಯೂ ಇನ್ಸ್‍ಪೆಕ್ಟರ್) ದೊಡ್ಡಯ್ಯ ಈ ದೂರು ನೀಡಿರುವವರು.
ನಗುವನಹಳ್ಳಿ ಗ್ರಾಮದಲ್ಲಿ ಜು.3 ರಂದು ನಡೆದ ಶಾಸಕರ ಜನಸ್ಪಂದನ ಕಾರ್ಯಕ್ರಮದಲ್ಲಿ ತಹಸೀಲ್ದಾರ್, ಡಿವೈಎಸ್ಪಿ, ಇತರ ಅಧಿಕಾರಿಗಳು, ಸಾರ್ವಜನಿಕರ ಸಮ್ಮುಖದಲ್ಲಿ ತನನ್ನು ಅವಾಚ್ಚ ಶಬ್ಧಗಳಿಂದ ನಿಂದಿಸಿದ್ದಲ್ಲದೆ, ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೊಡ್ಡಿಯ್ಯ ದೂರಿನಲ್ಲಿ ಆರೋಪಿಸಿದ್ದಾರೆ.
ಇದಲ್ಲದೆ, ನಂದಕುಮಾರ್ ಜಮೀನು ವಿಷಯವೊಂದರಲ್ಲಿ ತನ್ನಿಂದ 5 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದು, ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೊಲೆಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಕಳೆದ ತಿಂಗಳು 6 ರಂದು ಚಿಕ್ಕಂಕನಹಳ್ಳಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಕೊಕ್ಕರೆಹುಂಡಿ ಗ್ರಾಮದ ಮಹೇಶ್ ಪಾನಮತ್ತರಾಗಿ ಬಂದು ಶಾಸಕರ ಎದುರೇ ಪ್ರಾಣಬೆದರಿಕೆ ಹಾಕಿದ್ದಾರೆ ಎಂದೂ ದೊಡ್ಡಯ್ಯ ದೂರಿನಲ್ಲಿ ಆಪಾದಿಸಿದ್ದಾರೆ.
ಈ ಹಿಂದೆ ಅಂದರೆ, ಕಳೆದ ವರ್ಷ ಜೂನ್ 14 ರಂದು ಕರ್ತವ್ಯನಿರತನಾಗಿದ್ದ ನನ್ನನ್ನು ಶಾಸಕ ರಮೇಶ್ ಬಾಬು ಶ್ರೀರಂಗಪಟ್ಟಣ ಪುರಸಭೆಗೆ ಕರೆಸಿಕೊಂಡಿದ್ದ ಸಂದರ್ಭದಲ್ಲಿ ಶಾಸಕರ ಹಿಂಭಾಲಕರಾದ ಪುರಸಭಾ ಸದಸ್ಯರಾದ ಎಂ.ಎಲ್.ನಂದೀಶ್, ಇ.ಕುಮಾರ, ಗುತ್ತಿಗೆದಾರ ದಯಾನಂದ, ಸೋಮಸುಂದರ ಎಂಬುವರು ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಇ.ಕುಮಾರ್ ಈ ಸಂದರ್ಭ ಹಲ್ಲೆ ನಡೆಸಿದ್ದರು ಎಂದು ದೊಡ್ಡಯ್ಯ ದೂರಿದ್ದಾರೆ.
ನನಗೆ ಬೆದರಿಕೆ ಹಾಕಿದ ಬೆಂಬಲಿಗರ ವಿರುದ್ಧ ಪೊಲೀಸರಿಗೆ ದೂರು ನೀಡಲು ಸಿದ್ದನಾದ ಸಂದರ್ಭದಲ್ಲಿ ಶಾಸಕ ರಮೇಶ್‍ಬಾಬು ದೂರವಾಣಿ ಕರೆಮಾಡಿ ‘ದೂರು ನೀಡಿದರೆ ನಿನ್ನ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲು ಮಾಡಿಸುತ್ತೇನೆ’ ಎಂದು ಬೆದರಿಕೆ ಹಾಕಿರುತ್ತಾರೆ ಎಂದವರು ದೂರಿನಲ್ಲಿ ಆರೋಪಿಸಿದ್ದಾರೆ.
ತನ್ನ ಮೇಲಿನ ಹಲ್ಲೆ ಪ್ರಕರಣದ ಹಿಂದೆ ಶಾಸಕ ರಮೇಶ್‍ಬಾಬು ಕೈವಾಡವಿದೆ. ತನನ್ನು ವರ್ಗಾವಣೆ ಮಾಡಿಸಲು ವಿಫಲರಾಗಿ ನಿರಾಸೆಯಿಂದ ದೌರ್ಜನ್ಯ ನಡೆಸುತ್ತಿದ್ದಾರೆ. ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ತಾಳಲಾರದೆ ದೂರು ನೀಡುತ್ತಿದ್ದು, ಎಲ್ಲರನ್ನೂ ವಿಚಾರಣೆಗೊಳಪಡಿಸಿ ನನಗೆ ರಕ್ಷಣೆ ಕೊಟ್ಟು ನ್ಯಾಯ ದೊರಕಿಸಿಕೊಡಬೇಕು ಎಂದೂ ದೊಡ್ಡಯ್ಯ ದೂರಿನಲ್ಲಿ ಮನವಿ ಮಾಡಿದ್ದಾರೆ.
ನಾನು ಕೊಲೆ ಬೆದರಿಕೆ ಹಾಕಿಲ್ಲ:ರಮೇಶ್‍ಬಾಬು
ಕಂದಾಯ ನಿರೀಕ್ಷಕ ದೊಡ್ಡಯ್ಯ ತಾನು ಯಾವುದೇ ಬೆದರಿಕೆ ಹಾಕಿಲ್ಲ. ಈ ಹಿಂದೆ ಪುರಸಭೆಯಲ್ಲಿ ನಡೆದಿದ್ದ ಘಟನೆಯ ಸಂದರ್ಭದ ಮುದ್ರಿತ ಧ್ವನಿಯನ್ನು ಇಟ್ಟುಕೊಂಡು ಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಯಾರಿಗೂ ದೂರವಾಣಿ ಕರೆಮಾಡಿಲ್ಲ, ಕೊಲೆ ಬೆದರಿಕೆ ಹಾಕಿಲ್ಲ ಎಂದು ಶಾಸಕ ರಮೇಶ್‍ಬಾಬು ಸ್ಪಷ್ಟನೆ ನೀಡಿದ್ದಾರೆ.
ದೊಡ್ಡಯ್ಯ ವಿರುದ್ಧ ಜನರಿಗೆ ಆಕ್ರೋಶವಿದೆ. ಅವರ ಭ್ರಷ್ಟಾಚಾರ ಮೀತಿ ಮೀರಿದೆ. ಕಳೆದ 12 ವರ್ಷದಿಂದ ಕಂದಾಯ ಇಲಾಖೆ ಅಧಿಕಾರಿಯಾಗಿ ದೌರ್ಜನ್ಯ ನಡೆಸುತ್ತಾ ಬಂದಿದ್ದಾರೆ. ತಾಲೂಕಿನಲ್ಲಿ ದೊಡ್ಡಯ್ಯ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯ ಕೇಳಿ ಬಂದರೆ ಕ್ಷಮೆಯಾಚಿಸುತ್ತೇನೆ. ಪ್ರಭಾವಿಯಾದ ದೊಡ್ಡಯ್ಯನಿಗೆ ಕೆಲವರು ಕುಮ್ಮಕ್ಕು ನೀಡಿ ನನ್ನ ತೇಜೋವಧೆಗೆ ಮುಂದಾಗಿದ್ದಾರೆ ಎಂದು ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.