×
Ad

ಶಿವಮೊಗ್ಗ ಜಿ.ಪಂ. ಕಚೇರಿ ಆವರಣದಲ್ಲಿ ನಿಷೇಧಾಜ್ಞೆ ವಿಧಿಸುವ ಕೋರಿಕೆ ತಿರಸ್ಕರಿಸಿದ ಜಿಲ್ಲಾಧಿಕಾರಿ

Update: 2017-07-05 15:20 IST

ಶಿವಮೊಗ್ಗ, ಜು. 5: ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೀಡು ಮಾಡಿದ್ದ, ಇಡೀ ರಾಜ್ಯದ ಗಮನ ಸೆಳೆದಿದ್ದ ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಸಿಆರ್‌ಪಿಸಿ (ಅಪರಾಧ ದಂಡ ಪ್ರಕ್ರಿಯಾ ಸಂಹಿತೆ) 144 ನೇ ಕಲಂ ಅನ್ವಯ ನಿರಂತರ ನಿಷೇಧಾಜ್ಞೆ ವಿಧಿಸಬೇಕೆಂಬ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಯ ಕೋರಿಕೆಯನ್ನು ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ!

ಇತ್ತೀಚೆಗೆ ಈ ಕುರಿತಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಜಿ.ಪಂ. ಕಚೇರಿ ಆವರಣದಲ್ಲಿ ನಿರಂತರ ನಿಷೇಧಾಜ್ಞೆ ವಿಧಿಸಲು ಅನುಮತಿ ನೀಡದಿರುವ ಜಿಲ್ಲಾಧಿಕಾರಿಗಳ ನಿರ್ಧಾರವನ್ನು ವಿವಿಧ ಪಕ್ಷಗಳ ಕೆಲ ಹಾಲಿ - ಮಾಜಿ ಜಿ. ಪಂ. ಸದಸ್ಯರು, ಪಕ್ಷಗಳ ಮುಖಂಡರು ಸ್ವಾಗತಿಸಿದ್ದಾರೆ. ’ಡಿ.ಸಿ.ಯವರು ಉತ್ತಮ ನಿರ್ಧಾರ ಕೈಗೊಂಡು, ಪ್ರಜಾಪ್ರಭುತ್ವದ ಮೌಲ್ಯ ಉಳಿಸುವ ಕೆಲಸ ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಏನಿದು ಪ್ರಸ್ತಾಪ: ಕಳೆದ ಕೆಲ ತಿಂಗಳುಗಳ ಹಿಂದೆ, ಸರ್ಕಾರಿ ಜಮೀನು ಮಂಜೂರು ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಜಿ.ಪಂ. ಕಚೇರಿ ಆವರಣದಲ್ಲಿ ಡಿ.ಎಸ್.ಎಸ್. ಸಂಘಟನೆಯ ನೇತೃತ್ವದಲ್ಲಿ ಹಕ್ಕಿಪಿಕ್ಕಿ ಸಮುದಾಯದವರು ದಿಢೀರ್ ಆಗಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದರು. ಈ ಧರಣಿಯಲ್ಲಿ ವಯೋವೃದ್ದರು, ಮಹಿಳೆಯರು, ಮಕ್ಕಳು ಕೂಡ ಭಾಗಿಯಾಗಿದ್ದರು. ಅಹೋ ರಾತ್ರಿ ಧರಣಿ ಕೈ ಬಿಡುವಂತೆ ಅಧಿಕಾರಿಗಳು ಮಾಡಿದ್ದ ಮನವಿಗೆ ಪ್ರತಿಭಟನಾಕಾರರು ಒಪ್ಪದೆ ಇಡೀ ರಾತ್ರಿ ಕಚೇರಿ ಆವರಣದಲ್ಲಿಯೇ ಬೀಡುಬಿಟ್ಟಿದ್ದರು.

ಈ ಪ್ರಕರಣದ ನಂತರ ಜಿ.ಪಂ. ಸಿಇಓರವರು ಜಿಲ್ಲಾಡಳಿತಕ್ಕೆ ಪ್ರಸ್ತಾವನೆಯೊಂದನ್ನು ಸಲ್ಲಿಸಿದ್ದರು. ಜಿ.ಪಂ. ಕಚೇರಿ ಆವರಣದಲ್ಲಿ ನಡೆದಿದ್ದ ದಿಢೀರ್ ಅಹೋರಾತ್ರಿ ಧರಣಿಯನ್ನು ಉಲ್ಲೇಖಿಸಿದ್ದರು. ಈ ರೀತಿಯ ದಿಢೀರ್ ಹೋರಾಟಗಳು ಕಚೇರಿ ಆವರಣದಲ್ಲಿ ನಡೆದು ಏನಾದರೂ ಅನಾಹುತ ಸಂಭವಿಸಿದರೆ ಆಡಳಿತ ವ್ಯವಸ್ಥೆಗೆ ಕೆಟ್ಟ ಹೆಸರು ಬರಲಿದೆ. ಈ ಹಿನ್ನೆಲೆಯಲ್ಲಿ ಕಚೇರಿ ಆವರಣದಲ್ಲಿ ಸಿಆರ್‌ಪಿಸಿ 144 ನೇ ಕಲಂ ಅನ್ವಯ ನಿರಂತರ ನಿಷೇಧಾಜ್ಞೆ ವಿಧಿಸಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದರು.

ವ್ಯಾಪಕ ಆಕ್ರೋಶ: ಸಿಇಓರವರ ಈ ಕೋರಿಕೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇಡೀ ದೇಶದ ಯಾವುದೇ ಸರ್ಕಾರಿ ಕಚೇರಿಗಳಲ್ಲಿಯೂ ಇಲ್ಲದ ನಿಷೇಧಾಜ್ಞೆ ಶಿವಮೊಗ್ಗ ಜಿ.ಪಂ. ಕಚೇರಿ ಆವರಣದಲ್ಲೇಕೆ? ನಾಗರೀಕರ ಪ್ರತಿಭಟನೆಯ ಹಕ್ಕು ಕಿತ್ತುಕೊಳ್ಳುವ ಹುನ್ನಾರವಾಗಿದೆ ಎಂಬಿತ್ಯಾದಿಯಾಗಿ ಟೀಕಾ ಪ್ರಹಾರ ನಡೆಸಿದ್ದರು. ಈ ನಡುವೆ ಜಿಲ್ಲಾಧಿಕಾರಿಗಳು, ಸಿಇಓ ಪ್ರಸ್ತಾವನೆಯನ್ನು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ರವಾನಿಸಿದ್ದರು. ಕಚೇರಿ ಆವರಣದಲ್ಲಿ ನಿಷೇಧಾಜ್ಞೆ ವಿಧಿಸುವಂತಹ ಪರಿಸ್ಥಿತಿಯಿದೆಯೇ ಎಂಬ ಅಭಿಪ್ರಾಯ ಕೇಳಿದ್ದರು. ಜಿಲ್ಲಾ ರಕ್ಷಣಾಧಿಕಾರಿಗಳು ನಿಷೇಧಾಜ್ಞೆ ವಿಧಿಸಲು ಒಪ್ಪಿಗೆ ಸೂಚಿಸಿದ್ದರು. ಆದರೆ ಜಿಲ್ಲಾಧಿಕಾರಿಗಳು ತಮ್ಮ ಅಧಿಕಾರ ಬಳಸಿ ನಿಷೇಧಾಜ್ಞೆ ಕೋರಿಕೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News