×
Ad

ಜಿಎಸ್‌ಟಿ ಕುರಿತಂತೆ ಗೊಂದಲ : ಕ್ರಮಕ್ಕೆ ಆಗ್ರಹಿಸಿ ಮನವಿ

Update: 2017-07-05 16:42 IST

ಶಿವಮೊಗ್ಗ, ಜು. 5: ಇತ್ತೀಚೆಗೆ ಕೇಂದ್ರ ಸರ್ಕಾರ ದೇಶಾದ್ಯಂತ ಜಾರಿಗೊಳಿಸಿದ ಏಕರೂಪ ತೆರಿಗೆ (ಜಿಎಸ್‌ಟಿ) ಯ ಬಗ್ಗೆ ವರ್ತಕರು ಹಾಗೂ ಸಾರ್ವಜನಿಕರಲ್ಲಿ ಸ್ಪಷ್ಟ ಮಾಹಿತಿಯಿಲ್ಲದೆ ಪರಿತಪಿಸುವಂತಾಗಿದೆ. ಈ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ನಡೆಸಬೇಕೆಂದು ಆಗ್ರಹಿಸಿ ಕರ್ನಾಟಕ ಕನ್ನಡ ಸೇನೆ ಸಂಘಟನೆಯು ಬುಧವಾರ ನಗರದ ಡಿ.ಸಿ. ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್‌ರವರಿಗೆ ಮನವಿ ಪತ್ರ ಅರ್ಪಿಸಿತು.

’ಹುಚ್ಚನ ಮದುವೆಯಲ್ಲಿ ಉಂಡೋನೆ ಜಾಣ...’ ಎಂಬ ಮಾತಿನಂತೆ ಜಿಎಸ್‌ಟಿ ಜಾರಿಯಾದ ನಂತರ ಕೆಲ ಕ್ಷೇತ್ರಗಳಲ್ಲಿ ಬೇಕಾಬಿಟ್ಟಿಯಾಗಿ ಸಾರ್ವಜನಿಕರಿಂದ ಜಿಎಸ್‌ಟಿ ಹೆಸರಿನಲ್ಲಿ ಹಣ ಸುಲಿಗೆ ಮಾಡಲಾಗುತ್ತಿದೆ. ಹೇಳುವವರು, ಕೇಳುವವರ್ಯಾರು ಇಲ್ಲದಂತಾಗಿದೆ ಎಂದು ಸಂಘಟನೆ ಆರೋಪಿಸಿದೆ.
ಗ್ರಾಹಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಏಕರೂಪ ತೆರಿಗೆ ವ್ಯವಸ್ಥೆ ಜಾರಿಗೊಳಿಸುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಪ್ರಸ್ತುತ ಸೂಕ್ತ ಮಾಹಿತಿಯ ಕೊರತೆಯಿಂದಾಗಿ ಈ ವ್ಯವಸ್ಥೆ ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸುವಂತಾಗಿದೆ ಎಂದು ಸಂಘಟನೆ ದೂರಿದೆ.

ಜಿಎಸ್‌ಟಿಯ ಭೂತ ತೋರಿಸಿ ಕೆಲವೆಡೆ ಗ್ರಾಹಕರಿಂದ ಮನಸೋಇಚ್ಚೆ ತೆರಿಗೆ ಸಂಗ್ರಹಿಸಲಾಗುತ್ತಿದೆ. ಸೂಕ್ತ ಮಾಹಿತಿಯ ಕೊರತೆಯಿಂದ ಗ್ರಾಹಕರು ಕೂಡ ಕೇಳಿದಷ್ಟು ಹಣ ನೀಡುತ್ತಿದ್ದಾರೆ ಎಂದು ಸಂಘಟನೆ ಆಪಾದಿಸಿದೆ. ಈ ಕೂಡಲೇ ಜಿಲ್ಲಾಡಳಿತ ಜಿಎಸ್‌ಟಿ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ವಸ್ತುಗಳಿಗೆ ನಿಗದಿ ಮಾಡಿರುವ ತೆರಿಗೆಯ ಮೊತ್ತದ ಬಗ್ಗೆ ಮಾರಾಟಗಾರರಿಗೆ ಹಾಗೂ ಏಜೆನ್ಸಿಗಳಿಗೆ ಸೂಕ್ತ ಮಾಹಿತಿ ನೀಡುವ ಕೆಲಸ ಮಾಡಬೇಕು. ಕರಪತ್ರ ಮುದ್ರಿಸಿ ವಿತರಣೆ ಮಾಡಬೇಕು. ಅಂಗಡಿ-ಮುಂಗಟ್ಟು ಮತ್ತೀತರೆಡೆ ಸಾರ್ವಜನಿಕರಿಗೆ ಕಾಣುವಂತೆ ಜಿಎಸ್‌ಟಿ ತೆರಿಗೆಯ ಮಾಹಿತಿ ಪ್ರಕಟಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News