ಪ್ರಾದೇಶಿಕ ಪಕ್ಷದ ಸರಕಾರ ಅಗತ್ಯ:ಎಚ್.ಡಿ.ದೇವೇಗೌಡ
ಮಂಡ್ಯ, ಜು.5: ನನಗೆ ಖುರ್ಚಿ, ಅಧಿಕಾರ, ಮುಖ್ಯವಲ್ಲ. ರೈತರು ಮತ್ತು ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡುವುದು ಏಕೈಕ ಉದ್ದೇಶ. ಆದ್ದರಿಂದ ಜೆಡಿಎಸ್ ಸರಕಾರ ಬರಲು ಜನತೆ ಶಕ್ತಿ ತುಂಬಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಮನವಿ ಮಾಡಿದ್ದಾರೆ.
ಪಾಂಡವಪುರತಾಲೂಕಿನ ಚಿನಕುರಳಿಯಲ್ಲಿ ಎಸ್‌ಟಿಜಿ ಶಾಲಾ ಕಟ್ಟಡವನ್ನು ಬುಧವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಸಿಎಂ ಆಗೋದು ಒಂದು ಭಾಗವಷ್ಟೆ, ಆದರೆ, ರೈತರ ಶ್ರೇಯೋಭಿವೃದ್ಧಿಗೆ ಜೆಡಿಎಸ್ ಅಧಿಕಾರಕ್ಕೆ ತರಲು ಯತ್ನಿಸುತ್ತಿದ್ದೇನೆ ಎಂದರು.
ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯವಿರುವುದರಿಂದ ಕೇಂದ್ರ ಸರಕಾರವನ್ನು ಹತೋಟಿಯಲ್ಲಿಟ್ಟಿವೆ. ನಮ್ಮ ರಾಜ್ಯದ ಸಮಸ್ಯೆಗಳಿಗೆ ಸೂಕ್ತ ಪರಿಹಾರಕ್ಕೆ ಪ್ರಾದೇಶಿಕ ಪಕ್ಷದ ಸರಕಾರ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಸಂಸದ ಪುಟ್ಟರಾಜು ತನ್ನ ತಂದೆತಾಯಿ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಶ್ಲಾಘಿಸಿದ ಅವರು, ಸ್ಥಳೀಯ ಸಂಸ್ಥೆಗಳ ಉಪಚುನಾವಣೆಯಲ್ಲಿ ಜೆಡಿಎಸ್ ಗೆಲುವಿಗೆ ಸಂತಸ ವ್ಯ್ಕತಪಡಿಸಿದರು.
ಸಂಸದ ಸಿ.ಎಸ್.ಪುಟ್ಟರಾಜು, ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ನಾರಾಯಣಗೌಡ, ಡಿ.ಸಿ.ತಮ್ಮಣ್ಣ, ಕೆ.ಟಿ.ಶ್ರೀಕಂಠೇಗೌಡ, ಉಪ ಸಭಾಪತಿ ಮರಿತಿಬ್ಬೇಗೌಡ, ಮಾಜಿ ಶಾಸಕರಾದ ಪ್ರಭಾವತಿ ಜಯರಾಂ, ಎಂ.ಶ್ರೀನಿವಾಸ್, ಶಿವರಾಮೇಗೌಡ, ಸುರೇಶ್‌ಗೌಡ, ಇತರ ಮುಖಂಡರು ಉಪಸ್ಥಿತರಿದ್ದರು.
ಸಂಗೀತ ನಿರ್ದೇಶಕ ಹಂಸಲೇಖ, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.