ಡಿ.ಸಿ.ಸಿ. ಬ್ಯಾಂಕ್ ಪರವಾನಿಗೆ ರದ್ದತಿ ಎಚ್ಚರಿಕೆ : ನಬಾರ್ಡ್ ಸಿಜಿಎಂರಿಂದ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ
ಶಿವಮೊಗ್ಗ, ಜು. 6: ಶಿವಮೊಗ್ಗ ಡಿ.ಸಿ.ಸಿ. ಬ್ಯಾಂಕ್‌ನಲ್ಲಿ ಸಮರ್ಪಕವಾಗಿ ಬಂಡವಾಳ ಪುನರ್ ಸ್ಥಾಪನೆ ಯೋಜನೆ ಅನುಷ್ಠಾನಗೊಳಿಸಿಲ್ಲ. ಬಂಡವಾಳ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ ಎಂಬುವುದು ಸೇರಿದಂತೆ ವಿವಿಧ ಲೋಪದೋಷಗಳ ಪಟ್ಟಿ ಮಾಡಿರುವ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ (ನಬಾರ್ಡ್) ಯ ಮುಖ್ಯ ವ್ಯವಸ್ಥಾಪಕರು, ಈ ಕುರಿತಂತೆ ಇತ್ತೀಚೆಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾರವರಿಗೆ ಪತ್ರ ಬರೆದಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
’ರಾಜ್ಯಮಟ್ಟದ ಬ್ಯಾಂಕಿಂಗ್ ಪ್ರಗತಿ ಪರಿಶೀಲನೆ ನಡೆಸುವ ಜವಾಬ್ದಾರಿ ಹೊಂದಿರುವ ತಾವು ಶಿವಮೊಗ್ಗ ಡಿ.ಸಿ.ಸಿ. ಬ್ಯಾಂಕ್ ಅಸಮರ್ಪಕ ಕಾರ್ಯನಿರ್ವಹಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಬ್ಯಾಂಕ್‌ನಲ್ಲಿ ಬಂಡವಾಳ ಮರು ಸ್ಥಾಪಿಸುವ ಬಗ್ಗೆ ಕಾಲಮಿತಿಯೊಳಗೆ ಅಗತ್ಯ ಕ್ರಿಯಾ ಯೋಜನೆ ರೂಪಿಸಿಬೇಕು. ಇಲ್ಲದಿದ್ದರೆ ಸದರಿ ಬ್ಯಾಂಕ್ ಲೈಸೈನ್ಸ್ ರದ್ದುಗೊಳಿಸುವಂತೆ ಆರ್‌ಬಿಐಗೆ ಪತ್ರ ಬರೆಯಲಾಗುವುದು’ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ನಬಾರ್ಡ್ ಎಚ್ಚರಿಕೆ ನೀಡಿದೆ ಎಂದು ಹೇಳಲಾಗಿದೆ.
ಶಿವಮೊಗ್ಗ ಡಿ.ಸಿ.ಸಿ. ಬ್ಯಾಂಕ್‌ನಲ್ಲಿ ಈ ಹಿಂದೆ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ಅಡಮಾನ ಸಾಲದ ಅವ್ಯವಹಾರ ಬೆಳಕಿಗೆ ಬಂದಿತ್ತು. ಇದಾದ ನಂತರ ವಿವಿಧ ವಿಭಾಗಗಳಲ್ಲಿ ಸಾಲ ನೀಡಿಕೆಯಲ್ಲಿಯೂ ಅಕ್ರಮ ಬಯಲಿಗೆ ಬಂದಿತ್ತು. ಇದೀಗ ನಬಾರ್ಡ್ ಸಂಸ್ಥೆಯು ಡಿ.ಸಿ.ಸಿ. ಬ್ಯಾಂಕ್‌ನ ಲೈಸೈನ್ಸ್ ರದ್ದತಿಗೆ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಶಿಫಾರಸ್ಸು ಮಾಡುವ ಎಚ್ಚರಿಕೆಯ ಪತ್ರ ಬರೆದಿರುವುದು ಸಹಕಾರಿ ವಲಯದಲ್ಲಿ ವ್ಯಾಪಕ ಚರ್ಚೆಗೆಡೆ ಮಾಡಿದೆ.
ಆರೋಪವೇನು?: ನಬಾರ್ಡ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಕೆ. ವೆಂಕಟೇಶ್ವರರಾವ್‌ರವರು ಕಳೆದ ಜೂನ್ 21 ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಶಿವಮೊಗ್ಗ ಡಿ.ಸಿ.ಸಿ. ಬ್ಯಾಂಕ್‌ನ ಅಸಮರ್ಪಕ ಕಾರ್ಯನಿರ್ವಹಣೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.
ಬ್ಯಾಂಕ್‌ನಲ್ಲಿ ಬೆಳಕಿಗೆ ಬಂದ ಅಕ್ರಮಗಳ ಹಿನ್ನೆಲೆಯಲ್ಲಿ 2016 ರ ಮಾರ್ಚ್ 31 ರಂದು ಶಾಸನಬದ್ದ ಪರಿಶೀಲನೆಯನ್ನು ನಬಾರ್ಡ್ ನಡೆಸಿತ್ತು. ’ಬ್ಯಾಂಕಿಂಗ್ ಕಾಯ್ದೆ 11(1) ರಂತೆ ಡಿ.ಸಿ.ಸಿ. ಬ್ಯಾಂಕ್ ಕಾರ್ಯನಿರ್ವಹಣೆ ಮಾಡಿಲ್ಲ. ಹಣಕಾಸು ಸಂಸ್ಥೆಗಳ ಆರ್ಥಿಕ ಶಿಸ್ತು ಕಾಪಾಡುವ 2007 ರ ಆರ್.ಬಿ.ಐ. ಮಾರ್ಗಸೂಚಿಯನ್ನು ಬ್ಯಾಂಕ್ ಪಾಲನೆ ಮಾಡಿಲ್ಲ.
ಹಣಕಾಸು ಸಂಸ್ಥೆಗಳು ಬಂಡವಾಳದ ಶೇ. 7 ರಷ್ಟು ನಗದು (ಸಿಆರ್‌ಎಆರ್) ವ್ಯವಸ್ಥೆ ಹೊಂದಿರಬೇಕು. ಈ ಪ್ರಕಾರ ಡಿ.ಸಿ.ಸಿ. ಬ್ಯಾಂಕ್ ಶೇ. 9 ರಷ್ಟು ಸಿಆರ್‌ಎಆರ್ ಹೊಂದಿರಬೇಕಾಗಿತ್ತು. ಆದರೆ ಬ್ಯಾಂಕ್‌ನಲ್ಲಿ ಈ ವ್ಯವಸ್ಥೆ ನಕಾರಾತ್ಮಕವಾಗಿದ್ದು, ಶೇ. 1.29 ಕ್ಕೆ ಕುಸಿದಿದೆ. ಅನುತ್ಪಾದಕ ಆಸ್ತಿ ಹೆಚ್ಚಿದೆ. ನಕಲಿ ಬಂಗಾರ ಅಡಮಾನವಿಟ್ಟು ಬ್ಯಾಂಕ್‌ಗೆ 61.59 ಕೋಟಿ ರೂ. ವಂಚಿಸಿದ ಬಗ್ಗೆಯೂ ಯಾವುದೇ ಕ್ರಮಕೈಗೊಂಡಿಲ್ಲವೆಂದು’ ನಬಾರ್ಡ್ ದೂರಿದೆ ಎಂದು ತಿಳಿದುಬಂದಿದೆ.
ಬಿ.ಆರ್.ಕಾಯ್ದೆಯ 23(3)(ಬಿ) ನಿಯಮಗಳ ಸ್ಪಷ್ಟ ಉಲ್ಲಂಘನೆ ಮಾಡಲಾಗಿದೆ. ಪ್ರಸ್ತುತ ಮತ್ತು ಭವಿಷ್ಯದ ಠೇವಣಿದಾರರ ಹಿತರಕ್ಷಣೆ ಮಾಡುವಲ್ಲಿ ಪ್ರಾಮಾಣಿಕವಾಗಿ ನಡೆದುಕೊಂಡಿಲ್ಲ. ಬ್ಯಾಂಕಿಂಗ್ ವೃತ್ತಿಪರತೆಯ ವಿಚಾರದಲ್ಲಿ ವಿಫಲವಾಗಿದೆ ಎಂದು ನಬಾರ್ಡ್ ಬರೆದಿರುವ ಪತ್ರದಲ್ಲಿ ದೂರಿದೆ ಎಂದು ಹೇಳಲಾಗಿದೆ.