×
Ad

ಹನೂರು ಪಟ್ಟಣ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

Update: 2017-07-06 17:55 IST

ಹನೂರು, ಜು.5: ಪಟ್ಟಣದ ಬಂಡಳ್ಳಿ ರಸ್ತೆಯಲ್ಲಿರುವ ಮದ್ಯದಂಗಡಿಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಕರೆ ನೀಡಿದ್ದ ಹನೂರು ಪಟ್ಟಣ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಸ್ವಯಂಘೋಷಿತ ಬಂದ್:  ಸರ್ವೋಚ್ಛ ನ್ಯಾಯಾಲಯವು ನೀಡಿದ ತೀರ್ಪಿನನ್ವಯ ಪಟ್ಟಣದ ಮದ್ಯದಂಗಡಿಗಳು ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಿಂದ 220 ಮೀಟರ್‌ ದೂರಕ್ಕೆ ಸ್ಥಳಾಂತರಗೊಳ್ಳಬೇಕಾಗಿತ್ತು. ಈ ಆದೇಶದನ್ವಯ ಪಟ್ಟಣದ 2 ಬಾರ್‌ಗಳು ಬಂಡಳ್ಳಿ ರಸ್ತೆಗೆ ಸ್ಥಳಾಂತರಗೊಂಡವು. ಈ ಮೊದಲೇ ಇದ್ದ ಎರಡು ಬಾರ್‌ಗಳಿಂದ ಕಿರಿಕಿರಿ ಅನುಭವಿಸುತ್ತಿದ್ದ ಸಾರ್ವಜನಿಕರು ಮತ್ತೂ ಎರಡು ಬಾರ್ ಪ್ರಾರಂಭವಾದ ಹಿನ್ನೆಲೆ ಹೆಚ್ಚಿನ ಕಿರಿಕಿರಿ ಅನುಭವಿಸುವಂತಾಗಿತ್ತು.

ಅಲ್ಲದೆ ವಾಹನ ದಟ್ಟಣೆ ಹೆಚ್ಚಾಗಿ ಶಾಲಾ ಕಾಲೇಜುಗಳಿಗೆ ತೆರಳಬೇಕಿದ್ದ ವಿದ್ಯಾರ್ಥಿಗಳು, ದೈನಂದಿನ ಚಟುವಟಿಕೆಗಳಿಗೆ ಬ್ಯಾಂಕ್, ಆಸ್ಪತ್ರೆ, ಗ್ಯಾಸ್‌ ಏಜೆನ್ಸಿಗೆ ಬರುತ್ತಿದ್ದ ಸಾರ್ವಜನಿಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳುತ್ತಿದ್ದ ಸರ್ಕಾರಿ ಇಲಾಖಾ ನೌಕರರು ಪರಿತಪಿಸುವಂತಾಗಿತ್ತು. ಇದನ್ನು ಮನಗಂಡ ಸಾರ್ವಜನಿಕರು ಇಂದು ಹನೂರು ಪಟ್ಟಣದ ಸ್ವಯಂಘೋಷಿತ ಬಂದ್‌ಗೆ ಕರೆ ನೀಡಿದ್ದರು.

ಉಪವಿಭಾಗಾಧಿಕಾರಿಗಳ ಭೇಟಿ:  ಹನೂರು ಪಟ್ಟಣದ ಬಂದ್‌ಗೆ ಕರೆ ನಿಡಿದ್ದ ಹಿನ್ನೆಲೆಯಲ್ಲಿ ಭೇಟಿ ನಿಡಿದ ಉಪವಿಭಾಗಾಧಿಕಾರಿ ರೂಪ, ಅಬಕಾರಿ ನಿರೀಕ್ಷಕ ವೀಣಾ ಮತ್ತು ಅಧಿಕಾರಿಗಳ ತಂಡ ಸಾರ್ವಜನಿಕರಿಂದಅಹವಾಲು ಆಲಿಸಿದರು. ಈ ವೇಳೆ ಮಾತನಾಡಿದ ಸಾರ್ವಜನಿಕರು ಇದೊಂದು ಜನಿನಿಬಿಡ ಪ್ರದೇಶವಾಗಿದ್ದು ಪ್ರತಿನಿತ್ಯ 3,000ಶಾಲಾ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಶಾಲಾ ಕಾಲೇಜುಗಳಿಗೆ ತೆರಳಬೇಕಿದೆ. ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು, ಸಾರ್ವಜನಿಕರು ಸಹಸ್ರಾರು ಸಂಖ್ಯೆಯಲ್ಲಿ ಬ್ಯಾಂಕುಗಳಿಗೆ ಆಗಮಿಸುತ್ತಾರೆ. ಕ್ಷೇತ್ರ ಶಿಕ್ಷಣಾಧಿಖಾರಿಗಳ ಕಚೇರಿಗೂ ಇದೇ ಮಾರ್ಗವಾಗಿ ತೆರಳಬೇಕಿರುವುದರಿಮದ ನೂರಾರು ಸರ್ಕಾರಿ ನೌಕರರುಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಇಂತಹ ರಸ್ತೆಯಲ್ಲಿ ಮದ್ಯದಂಗಡಿಗಳಿಗೆ ಅನುಮತಿ ಕಲ್ಪಿಸುವುದು ಬೇಡ ಎಂದು ಮನವಿ ಮಾಡಿ ಪತ್ರ ನೀಡಿದ್ದರೂ ಮತ್ತೆ ಅನುಮತಿ ಕಲ್ಪಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಅಧ್ಯಕ್ಷ ವಿನೋದ್‌ ಕುಮಾರ್ ಮಾತನಾಡಿ, ಈ ರಸ್ತೆಗೆ ವಿಶ್ವಮಾನವ ಕುವೆಂಪು ಅವರ ನಾಮಕರಣ ಮಾಡಲು ಈಗಾಗಲೇ ಪಟ್ಟಣ ಪಂಚಾಯತಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ.ಆದರೆ ಇದೀಗ ಪಟ್ಟಣದಎಲ್ಲಾ ಮದ್ಯದಂಗಡಿಗಳು ಇದೇರಸ್ತೆಗೆ ಸ್ಥಳಾಂತರಗೊಂಡಿರುವುದರಿಂದ ಈ ರಸ್ತೆಯಲ್ಲಿ ಸಾರ್ವಜನಿಕರು ಓಡಾಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದುದರಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಉಪವಿಭಾಗಾಧಿಕಾರಿ ರೂಪ, ಸಾರ್ವಜನಿಕರ ಹಿತಕಾಯಲು ಜಿಲ್ಲಾಡಳಿತ ಬದ್ಧವಾಗಿದ್ದು ಸಾರ್ವಜನಿಕರ ಮನವಿಯನ್ನು ಪುರಸ್ಕರಿಸುತ್ತದೆ.ಆದುದರಿಂದ ಯಾವುದೇ ಕಾರಣಕ್ಕೂ ಉದ್ವೇಗಕ್ಕೊಳಗಾಗದೆ ಜಿಲ್ಲಾಡಳಿತದೊಂದಿಗೆ ಸ್ಪಂದಿಸಿ ಎಂದು ಮನವಿ ಮಾಡಿದರು. ಬಳಿಕ ಮಾತನಾಡಿ ಮದ್ಯದಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಆದೇಶ ನೀಡಲಾಗಿದ್ದು  ಈ ಸಂಬಂಧ ಜಿಲ್ಲಾಧಿಖಾರಿಗಳಿಗೆ ವರದಿ ನೀಡಲಾಗುವುದುಎಂದು ಭರವಸೆ ನೀಡಿದರು.

ಈ ವೇಳೆ ಸಾರ್ವಜನಿಕರುತಮ್ಮ ಹೇಳಿಕೆಯನ್ನು ಲಿಖಿತವಾಗಿ ನಿಡುವಂತೆ ಆಗ್ರಹಿಸಿದರು. ಇದಕ್ಕೊಪ್ಪದ ಉಪವಿಭಾಗಾಧಿಕಾರಿಗಳು ಮದ್ಯದಂಗಡಿಗೆ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಅನುಮತಿ ನೀಡಿರುವುದರಿಂದ ಅದನ್ನು ಸ್ಥಳಾಂತರಿಸಲು ನಾವು ಆದೇಶ ನೀಡಲು ಸಾಧ್ಯವಿಲ್ಲ. ಸಾರ್ವಜನಿಕರ ಮನವಿಗೆ ಸ್ಪಂದಿಸಲಾಗುವುದು. ಆದುದರಿಂದ ಬಂದ್‌ಕೈಬಿಡುವಂತೆ ಮನವಿ ಮಾಡಿದರು.

ಬಳಿಕ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಾರ್ವಜನಿಕರು ಕೂಡಲೇ ಎಲ್ಲಾ ಬಾರ್‌ಗಳನ್ನು ಈ ರಸ್ತೆಯಿಂದ ಸ್ಥಳಾಂತರಿಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನೂಉಗ್ರ ಹೋರಾಟ ನಡೆಸುವಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಜಯಪ್ರಕಾಶ್‌ಗುಪ್ತ, ರಾಜೂಗೌಡ, ಬಾಲರಾಜ್‌ನಾಯ್ಡು, ಟಿಎಪಿಸಿಎಂಎಸ್ ನಿರ್ದೇಶಕ ಮಾದೇಶ್,ಮುಖಂಡರಾದಚಿಕ್ಕತಮ್ಮಯ್ಯ, ವೆಂಕಟರಮಣ ನಾಯ್ಡು, ನಂಜುಂಡೇಗೌಡ, ರಾಜೂಗೌಡ, ಕೃಷ್ನೇಗೌಡ, ಮಾದೇಶ್, ಗಿರೀಶ್ ವೆಂಕಟೇಶ್, ಸಿದ್ದೇಗೌಡ ಸೇರಿದಂತೆ 300ಕ್ಕೂ ಹೆಚ್ಚು ಸಾರ್ವಜನಿಕರು ಹಾಜರಿದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News