×
Ad

ಭ್ರಷ್ಟಾಚಾರದ ಆರೋಪ: ಡಿಡಿಪಿಐ ನಾಗೇಶ್‌ರನ್ನು ಅಮಾನತ್ತುಗೊಳಿಸಿ ಕಾನೂನು ಕ್ರಮ: ಆರ್.ರೋಷನ್ ಬೇಗ್

Update: 2017-07-06 18:55 IST

ಚಿಕ್ಕಮಗಳೂರು, ಜು.6: ಶಿಕ್ಷಕರ ನಿಯೋಜನೆ ಸಂಬಂಧ ಭ್ರಷ್ಟಾಚಾರದ ಆರೋಪ ಹೊತ್ತು ದೀರ್ಘ ಕಾಲದ ರಜೆಯಲ್ಲಿ ತೆರಳಿರುವ ಡಿಡಿಪಿಐ ನಾಗೇಶ್ ಅವರನ್ನು ಅಮಾನತುಗೊಳಿಸಿ ಕಾನೂನು ಕ್ರಮ ಜರುಗಿಸಿ ಶಿಕ್ಷೆಗೆ ಗುರಿ ಪಡಿಸುವಂತೆ ಸಂಬಂಧ ಪಟ್ಟವರಿಗೆ ಶಿಫಾರಸ್ಸು ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಮಂತ್ರಿ ಆರ್.ರೋಷನ್ ಬೇಗ್ ತಿಳಿಸಿದರು.

ಗುರುವಾರ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನಿಯೋಜನೆಗೊಂಡಿರುವ ರೋಷನ್‌ಬೇಗ್ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಲ್ಲೆಯ ಬಹುತೇಕ ಎಲ್ಲಾ ಇಲಾಖೆಗಳಲ್ಲಿ ನೂರಾರು ಹುದ್ದೆಗಳು ಖಾಲಿ ಇದೆ. ಕಂದಾಯ ಇಲಾಖೆಯಲ್ಲಿ 685 ಹುದ್ದೆಗಳು, ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ 184 ಹುದ್ದೆಗಳ ಸಹಿತ ಅರೋಗ್ಯ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದೆ. ಈ ಹಿನ್ನೆಲೆಯಲ್ಲಿ ಆಡಳಿತಕ್ಕೆ ತೊಂದರೆಯಾಗಿದ್ದು, ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.

ವಿಕೋಪ ಪರಿಹಾರ ನಿಧಿಯಲ್ಲಿ ಸಾಕಷ್ಟು ಅನುದಾನ ಬಂದಿದ್ದು ಜಿಲ್ಲಾಡಳಿತ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದೆ. ಗೋ ಶಾಲೆ ಆರಂಭಿಸಿ ನಡೆಸುತ್ತಿರುವುದು ಅತ್ಯುತ್ತಮವಾಗಿದೆ. ಅಗತ್ಯ ಬಿದ್ದಲ್ಲಿ ಇನ್ನೂ ಹೆಚ್ಚಿನ ಗೋಶಾಲೆಗಳನ್ನು ತೆರೆಯಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸುಪ್ರೀಂ ಕೋರ್ಟ್‌ನ ಸೂಚನೆಯಂತೆ ಬಾಬಾಬುಡನ್ ಗಿರಿ ವಿವಾದ ಇತ್ಯರ್ಥ ಪಡಿಸುವ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಸಚಿವರು, ಈ ಸಂಬಂಧ ಸರ್ಕಾರ ರಚಿಸಿರುವ ಸಂಪುಟ ಉಪ ಸಮಿತಿಯಲ್ಲಿ ತಾವು ಒಬ್ಬರು ಸದಸ್ಯರಾಗಿದ್ದು, ಇದೀಗ ಒಂದು ಸಭೆ ನಡೆದಿದೆ. ಮುಂದೆ ಸ್ಥಳೀಯವಾಗಿ ಎರಡೂ ಸಮಾಜದ ಜನರನ್ನು ಒಳಗೊಂಡ ಸಮಿತಿ ರಚಿಸಿ ಅಭಿಪ್ರಾಯ ಸಂಗ್ರಹಿಸಿ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಲಾಗುವುದು. ಕನಿಷ್ಟ 3 ತಿಂಗಳಲ್ಲಿ ಈ ಪ್ರಯತ್ನ ನಡೆಸುವುದಾಗಿ ತಿಳಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಎಲ್ಲಾ ಜನ ಪ್ರತಿನಿಧಿಗಳು ಹಾಗೂ ಸಾರ್ವಜನಿಕ ಸಂಘಸಂಸ್ಥೆಗಳ ಸಲಹೆಯಂತೆ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದ ಸಚಿವರು, ನಿನ್ನೆ ಸಂಜೆ ತಮಗೆ ಈ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೇಮಕ ಮಾಡಿದ ಅದೇಶ ಸಿಕ್ಕಿದ ತಕ್ಷಣ ಇಂದು ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಸಂಜೆ ಶೃಂಗೇರಿಗೆ ತೆರಳಿ ಗುರುಗಳಿಂದ ಆಶೀರ್ವಾದ ಪಡೆದು ನಂತರ ಈ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವ ಭರವಸೆ ನೀಡಿದರು.
ಈ ಸಮಯದಲ್ಲಿ ಜಿಲ್ಲಾಧಿಕಾರಿ ಸತ್ಯವತಿ, ಎಸ್ಪಿ ಕೆ.ಅಣ್ಣಾಮಲೈ, ಜಿಪಂ ಸಿಇಓ ಡಾ. ರಾಗಪ್ರಿಯ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News