ಗಂಗೋತ್ರಿ ಶಿಖರವನ್ನೇರಿದ ಮಹಾನ್ ಸಾಧಕ ದೇಜಗೌ
ಮಂಡ್ಯ, ಜು.6: ಡಾ.ದೇ.ಜವರೇಗೌಡರು (ದೇಜಗೌ) ಕುಗ್ರಾಮದಲ್ಲಿ ಹುಟ್ಟಿ, ಗಂಜಲದಲ್ಲಿ ಬೆಳೆದು ಗಂಗೋತ್ರಿಯ ಶಿಖರವನ್ನೇರಿದ ಮಹಾನ್ ಸಾಧಕ ಎಂದು ಸಾಹಿತಿ ಡಾ.ಸಿ.ಪಿ.ಕಷ್ಣಕುಮಾರ್ ಅಭಿಪ್ರಾಯ ಅಭಿಪ್ರಾಯಪಟ್ಟಿದ್ದಾರೆ.
ನಗರದ ಮಹಿಳಾ ಸರಕಾರಿ ಕಾಲೇಜಿನ ವನರಂಗ ಆವರಣದಲ್ಲಿ ಶ್ರೀರಂಗಪಟ್ಟಣದ ಜನಮನ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಗುರುವಾರ ನಡೆದ ದೇಜಗೌಡ ಜಯಂತಿ ಮತ್ತು ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತವನ್ನು ತಿಳಿಯಬೇಕಾದರೆ ಸ್ವಾಮಿ ವಿವೇಕಾನಂದರನ್ನು ಕತೆಗಳನ್ನು ತಿಳಿಯಬೇಕು ಎಂದು ರವೀಂದ್ರನಾಥ ಠ್ಯಾಗೋರ್ ಹೇಳಿದಂತೆ ಕರ್ನಾಟಕವನ್ನು ಅರಿಯಬೇಕಾದರೆ ದೇಜಗೌರವರವರ ಜೀವನ ಚರಿತ್ರೆ, ಕತೆಗಳನ್ನು ಓದಬೇಕು ಎಂದು ಅವರು ಹೇಳಿದರು.
ದೇಜಗೌ ಅವರ ಸೇವೆ ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಸೀಮಿತವಾಗಿರಲಿಲ್ಲ. ಕನ್ನಡ ನಾಡು-ನುಡಿ, ನೆಲ-ಜಲ ರಕ್ಷಣೆಗೆ ಕೊನೆಯವರೆಗೂ ಹೋರಾಟ ನಡೆಸಿದರು. ಕನ್ನಡ ಭಾಷಾ ಮಾಧ್ಯಮ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ನಡೆಸಿದ ಹೋರಾಟ ಸ್ಮರಣೀಯ ಎಂದು ಅವರು ತಿಳಿಸಿದರು.
ದೇಜಗೌಡ ಕುವೆಂಪು ಅವರ ಅಚ್ಚುಮೆಚ್ಚಿನ ಶಿಕ್ಷರಾಗಿದ್ದರು. ಕುವೆಂಪು ಅವರಿಂದ ಕನ್ನಡ ದೀಕ್ಷೆ ಪಡೆದುರ. ದೇಜಗೌ ಅವರ ಬಗ್ಗೆ ಮಾತನಾಡುವಾಗ ಕುವೆಂಪು ಅವರನ್ನು ಹೊರತುಪಡಿಸಲು ಸಾಧ್ಯವಿಲ್ಲ. ಕುವೆಂಪು-ದೇಜಗೌ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಸಿಪಿಕೆ ಸ್ಮರಿಸಿದರು.
ಕನ್ನಡದ ಬಗ್ಗೆ ಅಪಾರ ಗೌರವವನ್ನಿಟ್ಟುಕೊಂಡಿದ್ದ ದೇ.ಜವರೇಗೌಡರು ಆಂಗ್ಲಭಾಷೆಯಿಂದ ಕನ್ನಡಕ್ಕೆ ಹಲವಾರು ಕೃತಿಗಳನ್ನು ತಂದಿದ್ದಾರೆ. ಭಾಷಾಂತರ ವಿಷಯದಲ್ಲಿ ಅವರದು ಎತ್ತಿದಕೈ. ಸುಮಾರು ಆರು ಸಾವಿರ ಪುಟದಷ್ಟು ಭಾಷಾಂತರ ಮಾಡಿದ್ದಾರೆ ಎಂದು ಅವರು ವಿವರಿಸಿದರು.
ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಮಹತ್ವದ ಕೊಡುಗೆಯನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದೆ. ಆದರೆ, ಇಂದು ಆಂಗ್ಲ ವ್ಯಾಮೋಹದಿಂದ ಕನ್ನಡವನ್ನು ಕಡೆಗಣನೆ ಮಾಡಲಾಗುತ್ತಿದೆ ಎಂದು ಅವರು ವಿಷಾದಿಸಿದರು.
ಜನಮನ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಚಿಕ್ಕಹಾರೋಹಳ್ಳಿ ಸಿ.ಪುಟ್ಟಸ್ವಾಮಿ, ಸಾಹಿತಿ ಡಾ.ಕೆ.ಭೈರವಮೂರ್ತಿ, ಪ್ರಾಂಶುಪಾಲ ಪ್ರೊ.ವಿ.ಟಿ.ರಾಮಚಂದ್ರ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎ.ಆರ್. ಮಧನ್‌ಕುಮಾರ್, ಇತರ ಗಣ್ಯರು ಉಪಸ್ಥಿತರಿದ್ದರು.