ಸಿನೆಮಾದ ಫೋಟೊವನ್ನು ಪೋಸ್ಟ್ ಮಾಡಿ ಕೋಮುಗಲಭೆಯ ಬೆಂಕಿಗೆ ದ್ವೇಷದ ತುಪ್ಪ ಸುರಿದ ಬಿಜೆಪಿ ನಾಯಕಿ

Update: 2017-07-07 12:25 GMT

ಕೊಲ್ಕತ್ತಾ, ಜು.7: "ಹಿಂದೂ ಎಂದು ಊಹಿಸಲಾಗಿರುವ ಆ ಮಹಿಳೆಯ ಮುಖದಲ್ಲಿ ಸಂಕಟ ಎದ್ದು ಕಾಣುತ್ತಿದೆ. ತನ್ನ ಸೀರೆಯ ಅಂಚನ್ನು ಕೈಯಲ್ಲಿ ಭದ್ರವಾಗಿ ಹಿಡಿದುಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾಳೆ. ಇನ್ನೊಂದೆಡೆ ಕೆಲವರು(ಇವರ ಮುಖ ಕಾಣುತ್ತಿಲ್ಲ) ಈಕೆಯ ಸೀರೆಯನ್ನು ಬಲಾತ್ಕಾರದಿಂದ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಸ್ಥಳದಲ್ಲಿ ಗುಂಪು ಸೇರಿದ್ದ ಜನ ಇದನ್ನು ವೀಕ್ಷಿಸುತ್ತಿದ್ದಾರೆ".

ಈ ಚಿತ್ರವೇ ಸಾಕು ಜನರ ಮನಸ್ಸಿನಲ್ಲಿ ಕಿಡಿ ಹೊತ್ತಿಸಲು. ಅದರಲ್ಲೂ ಈ ರೀತಿಯ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಾಕಿ, ಜೊತೆಗೆ ‘ಪ.ಬಂಗಾಳ ರಾಜ್ಯದಲ್ಲಿ ಹಿಂದೂ ಸಮುದಾಯದವರಿಗೆ ರಕ್ಷಣೆಯೇ ಇಲ್ಲ ’ ಎಂಬರ್ಥ ಬರುವ ಹೇಳಿಕೆ ಪ್ರಕಟಿಸಿದರೆ ಏನಾದೀತು?

ಪ.ಬಂಗಾಳದಲ್ಲಿ ಫೇಸ್‌ಬುಕ್‌ನಲ್ಲಿ ಪ್ರಕಟವಾದ ಬರಹವೊಂದು ಭಾರೀ ವಿವಾದ ಹುಟ್ಟಿಸಿ, ಕೋಮುಗಲಭೆಗೆ ಕಾರಣವಾಗಿತ್ತು. ರಾಜ್ಯದಲ್ಲಿ ಕ್ರಮೇಣ ಪರಿಸ್ಥಿತಿ ಸಹಜತೆಗೆ ಮರಳುತ್ತಿರುವಂತೆಯೇ ಮತ್ತೆ ಈ ರೀತಿಯ ಫೋಟೋ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ನಿರ್ದಿಷ್ಟ ಸಮುದಾಯದ ಜನರ ಆಕ್ರೋಶವನ್ನು ಕೆರಳಿಸುವುದು ಇವರ ಉದ್ದೇಶ ಎಂಬುದು ಸ್ಪಷ್ಟವಾಗಿದೆ.

ಆದರೆ ಇಲ್ಲಿ ಇರುವ ಅಸಲಿ ಸಂಗತಿಯೆಂದರೆ- ಈ ಫೋಟೋ ನಕಲಿಯಾಗಿದ್ದು ‘ಔರತ್ ಖಿಲೋನಾ ಹೈ’ ಎಂಬ ಭೋಜ್‌ಪುರಿ ಸಿನಿಮಾದ ದೃಶ್ಯದ ಫೋಟೋ ಆಗಿದೆ. ಬಿಜೆಪಿಯ ಮುಖಂಡ ಮನೋಜ್ ತಿವಾರಿ ಕೂಡಾ ಈ ಸಿನೆಮಾದಲ್ಲಿ ಪಾತ್ರ ವಹಿಸಿದ್ದಾರೆ. ಈ ಫೋಟೋವನ್ನು ಫೇಸ್‌ಬುಕ್‌ಗೆ ಪೋಸ್ಟ್ ಮಾಡಿದವರೂ ಬಿಜೆಪಿಯ ಪ್ರಮುಖ ಮುಖಂಡರೋರ್ವರು ಎಂಬುದಿಲ್ಲಿ ಗಮನಾರ್ಹ. ಹರ್ಯಾಣ ಬಿಜೆಪಿ ಘಟಕದ ರಾಜ್ಯ ಕಾರ್ಯಕಾರಿ ಮಂಡಳಿಯ ಸದಸ್ಯೆ ವಿಜೇತಾ ಮಲಿಕ್ ಎಂಬವರು ಈ ರೀತಿ ಮಾಡಿರುವುದು ಈಗ ಬೆಳಕಿಗೆ ಬಂದಿದೆ.

ವಿಜೇತಾ ಪೋಸ್ಟ್ ಮಾಡಿರುವ ಚಿತ್ರವನ್ನು ನೂರಾರು ಮಂದಿ ‘ಲೈಕ್’ ಮಾಡಿದ್ದಾರೆ. ಬಿಜೆಪಿಯ ಕೆಲವು ಮುಖಂಡರು ಕೋಮು ಹಿಂಸೆಯ ಉರಿಗೆ ಯಾವ ರೀತಿ ತುಪ್ಪ ಸುರಿಯುತ್ತಾರೆ ಎಂಬುದಕ್ಕೆ ಈ ಪ್ರಕರಣ ನಿದರ್ಶನ ಎಂದು ಹಲವಾರು ಮಂದಿ ಟೀಕಿಸಿದ್ದು, ಈಕೆಯ ವಿರುದ್ಧ ಬಿಜೆಪಿ ನಾಯಕರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News