ಕಿಮ್ಮನೆ ರತ್ನಾಕರ್ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಿದ ವಕೀಲ ಕೆ.ಪಿ.ಶ್ರೀಪಾಲ್
ಶಿವಮೊಗ್ಗ, ಜು. 6: ತಮ್ಮನ್ನು ’ರೋಲ್‌ಕಾಲ್’, ’ಪೇಮೆಂಟ್’ ಹೋರಾಟಗಾರನೆಂದು ಹೇಳಿಕೆ ನೀಡಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಿರುದ್ದ ಶಿವಮೊಗ್ಗದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿರುವುದಾಗಿ ವಕೀಲ, ಹೋರಾಟಗಾರ ಕೆ.ಪಿ.ಶ್ರೀಪಾಲ್ ತಿಳಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ತೀರ್ಥಹಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಮ್ಮ ವಿರುದ್ದ ಮಾನಹಾನಿಕರ ಹೇಳಿಕೆ ನೀಡಿದ್ದಾರೆ. ’ಶಿವಮೊಗ್ಗದಲ್ಲಿ ಖಾಯಂ ಹೋರಾಟಗಾರರಾಗಿರುವ ಕೆ.ಪಿ.ಶ್ರೀಪಾಲ್‌ರವರಿಗೆ ನೈತಿಕತೆ ಇದೆಯೇ. ಬೆಳಿಗ್ಗೆ ಯಡಿಯೂರಪ್ಪರ ವಿರುದ್ದ ಪ್ರತಿಭಟನೆ ಮಾಡಿ ರಾತ್ರಿ ಕೆಜೆಪಿಯ ಮಂಜುನಾಥಗೌಡರನ್ನು ಬೆಂಬಲಿಸುವ, ದುಡ್ಡಿಗಾಗಿ ಏನನ್ನು ಮಾಡಲು ಸಿದ್ದರಾಗಿರುವವರಾಗಿದ್ದಾರೆ.
ಇಂತಹ ಪೇಮೆಂಟ್ ಹೋರಾಟಗಾರರಿಗೆ, ರೋಲ್‌ಕಾಲ್ ಲೀಡರ್‌ಗಳಿಗೆ ಅಂಜುವ ವ್ಯಕ್ತಿ ನಾನಲ್ಲ. ಎಲ್ಲ ಲೆಫ್ಟಿಸ್ಟ್ ತಂತ್ರಗಾರಿಕೆಗಳನ್ನು ಮಾಡುತ್ತಿದ್ದಾರೆ. ಈಶ್ವರಪ್ಪ, ಯಡಿಯೂರಪ್ಪರ ವಿರುದ್ದ ಪ್ರತಿಭಟನೆ ಮಾಡಿ ಕೆಜೆಪಿಗೆ ಬೆಂಬಲಿಸಿದ್ದಾರೆ. ನಾನು ಅವರಂತೆ ಪೇಮೆಂಟ್ ಹೋರಾಟಗಾರನಲ್ಲ. ರೋಲ್‌ಕಾಲ್ ಲೀಡರ್ಸ್‌ಗಳೆಲ್ಲ ಥ್ರೇಟ್ ಹಾಕಲು ಬರುವುದು ಬೇಡ’ ಎಂಬಿತ್ಯಾದಿಯಾಗಿ ಕಿಮ್ಮನೆ ರತ್ನಾಕರ್ ತಮ್ಮ ತೇಜೋವಧೆ ನಡೆಸಿದ್ದಾರೆ ಎಂದು ಕೆ.ಪಿ.ಶ್ರೀಪಾಲ್‌ರವರು ನ್ಯಾಯಾಲಯಕ್ಕೆ ದಾಖಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.