ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದುದು: ಮಾಜಿ ಸಚಿವ ಕಿಮ್ಮನೆ ರತ್ನಾಕರ್
ಶಿವಮೊಗ್ಗ, ಜು. 8: ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದುದಾಗಿದ್ದು, ವಿದ್ಯಾರ್ಥಿ ದೆಸೆಯಲ್ಲಿಯೇ ಮುಂದಿನ ಜೀವನ ಹೇಗಿರಬೇಕು ಎಂಬುದನ್ನು ನಿರ್ಧರಿಸಿ ರೂಪಿಸಿಕೊಳ್ಳಬೇಕು. ಮುಂದಿನ ಜೀವನದ ಬಗ್ಗೆ ಸ್ಪಷ್ಟ ಗುರಿ, ದಾರಿ ಕಂಡುಕೊಳ್ಳಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕಿವಿಮಾತು ಹೇಳಿದ್ದಾರೆ.
ಶನಿವಾರ ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಎನ್‌ಎಸ್‌ಯುಐ ವತಿಯಿಂದ ಆಯೋಜಿಸಿದ್ದ ಟಾಕ್ ವಿತ್ ಟಾಪರ್ ಸ್ಕೋರರ್ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರವಾಗಿದೆ. ಹಲವಾರು ಸಂಸ್ಕೃತಿ, ಆಚರಣೆ ಭಾಷೆಗಳಿಲ್ಲವೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಮಕ್ಕಳ ಮೇಲಿದೆ. ನಮ ಸಂಸ್ಕೃತಿಗೆ ಧಕ್ಕೆಯಾಗದಂತೆ ವಿದ್ಯಾರ್ಥಿಗಳು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಷ್ಟಪಟ್ಟು ಓದಿ, ತಂದೆ ತಾಯಿಗೆ, ಕುಟುಂಬಕ್ಕೆ ಗೌರವ ತರಬೇಕು. ಅವರು ನಿಮ್ಮ ಮೇಲಿಟ್ಟಿರುವ ನಂಬಿಕೆ, ವಿಶ್ವಾಸ ಉಳಿಸಿಕೊಳ್ಳಬೇಕು. ಉತ್ತಮ ಗುಣ, ಮೌಲ್ಯ ಬೆಳೆಸಿಕೊಂಡು ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ಕೆಲವು ಶಕ್ತಿಗಳು ವ್ಯವಸ್ಥೆಗೆ ಧಕ್ಕೆ ತರಲು ಕಾಯುತ್ತಿರುತ್ತವೆ. ತಪ್ಪು ಸಂದೇಶ ಹರಡಿ, ಮಕ್ಕಳ ಮನಸ್ಸುಗಳಲ್ಲಿ ದ್ವೇಷದ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತವೆ. ಎನ್‌ಎಸ್‌ಯುಐ ವಿದ್ಯಾರ್ಥಿಗಳಲ್ಲಿ ಈ ದುಷ್ಟ ಶಕ್ತಿಗಳ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಬೇಕು. ಹಾಗೆಯೇ ಮಾನವೀಯತೆ, ವಿಶಾಲ ಮನೋಭಾವವನ್ನು ಬೆಳೆಸಬೇಕು ಎಂದು ತಿಳಿಸಿದರು.