ಲೋಕಾಯುಕ್ತ ಸಂಸ್ಥೆಯಿಂದ ಸರ್ಕಾರ ಜನರಿಗೆ ಮಾಡುತ್ತಿರುವ ಅನ್ಯಾಯವನ್ನು ಕಂಡುಕೊಂಡೆ. ನಿವೃತ್ತ ನ್ಯಾ. ಸಂತೋಷ್ ಹೆಗಡೆ

Update: 2017-07-08 13:17 GMT

ಭಟ್ಕಳ, ಜು. 8: ಲೋಕಾಯುಕ್ತಕ್ಕೆ ಬರುವ ಪೂರ್ವ ನಾನೊಬ್ಬ ಕೂಪಮಂಡೂಕನಂತಿದ್ದೆ. ಲೋಕಾಯುಕ್ತ ಸಂಸ್ಥೆಯ ಜನರಿಂದಲೇ ರಚಿತಗೊಂಡ ಸರ್ಕಾರ ಜನರಿಗೆ ಯಾವ ರೀತಿಯ ಅನ್ಯಾಯ ಮಾಡುತ್ತಿದೆ ಎಂಬುದನ್ನು ನಾನು ಕಂಡುಕೊಂಡೆ ಎಂದು ನಿವೃತ್ತ ನ್ಯಾಯಾಮೂರ್ತಿ ನಾಡೋಜ ಸಂತೋಷ್ ಹೆಗಡೆ ಹೇಳಿದರು.

ಅವರು ಶನಿವಾರ ಇಲ್ಲಿನ ನಾಗಯಕ್ಷೆ ಸಭಾಭವನದಲ್ಲಿ ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಬೆಳ್ಳಿಹಬ್ಬದ ಸಂಭ್ರಮಾಚರಣೆ ಅಂಗವಾಗಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಜಿಲ್ಲಾಮಟ್ಟದ ಪತ್ರಕರ್ತರ, ವಕೀಲರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಭ್ರಷ್ಟಚಾರದ ಆರೋಪದಡಿ ಜೈಲಿಗೆ ಹೋಗಿ ಜಾಮೀನು ಮೇಲೆ ಹೊರಬಂದ ವ್ಯಕ್ತಿಯನ್ನು ಹಾರಹಾಕಿ ಸನ್ಮಾನ ಮಾಡುತ್ತಿರುವ ಈ ಯುಗದಲ್ಲಿ ನಾವು ಚಿಕ್ಕವರಿದ್ದಾಗ ಯಾರಾದರೂ ಭ್ರಷ್ಟರೆನಿಸಿಕೊಂಡರೆ ಅವರನ್ನು ಆ ಸಮಾಜ ಬಹಿಷ್ಕಾರ ಹಾಕುತ್ತಿತ್ತು. ಆದರೆ ಈಗ ಅದೇ ಸಮಾಜ ಭ್ರಷ್ಟರನ್ನು ಹಾರ ಹಾಕಿ ಸನ್ಮಾನಿಸುತ್ತಿದೆ ಎಂದು ವ್ಯಂಗ್ಯವಾಡಿದ ಅವರು ಇಂತಹ ಸಮಾಜ ಬದಲಾವಣೆ ನನ್ನಿಂದ ಸಾಧ್ಯವಿಲ್ಲ. ಯುವ ಸಮೋಹ ಮುಂದೆ ಬಂದು ಭ್ರಷ್ಟರನ್ನು ಬಹಿಷ್ಕರಿಸುವಂತಹ ಸಮಾಜ ಕಟ್ಟಬೇಕೆಂದು ಕರೆ ನೀಡಿದರು.

ನಮ್ಮ ಹಿರಿಯರು ಸಮಾಜದ ಶಾಂತಿ ಸೌಹಾರ್ಧತೆ ನೆಲೆಸುವಂತಾಗಲು ಮೌಲ್ಯಯುತ ಜೀವನ ಸಾಗಿಸಿದರು. ಇಂದು ನಮ್ಮಲ್ಲಿ ಆ ಮೌಲ್ಯಗಳು ಇಲ್ಲವಾಗಿದೆ ಯುವಕರು ತಮ್ಮ ಜೀವನದಲ್ಲಿ ಮೌಲ್ಯಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಸಮಾಜವನ್ನು ಕಟ್ಟಬೇಕಾಗಿದೆ. ನಮ್ಮ ಆಸೆಗಳಿಗೆ ಕೊನೆಯಿಲ್ಲ. ಎಷ್ಟು ಗಳಿಸಿದರೂ ಇನ್ನಷ್ಟು ಬೇಕು ಎಂಬ ಹಪಹಪಿ ನಮ್ಮಲ್ಲಿ ಬೆಳೆಯುತ್ತಿದೆ ಇದಕ್ಕೆ ದುರಾಸೆಯೇ ಕಾರಣ. ನಾವು ಹಗರಣಗಳ ದೇಶದಲ್ಲಿ ಬದುಕುತ್ತಿದ್ದೇವೆ. ಸಾವಿರಾರು ಹಗರಣಗಳು ನಡೆಯುತ್ತಿವೆ. ಪ್ರತಿಯೊಂದು ಹಗರಣಗಳಲ್ಲಿ ಅಂಕಿಸಂಖ್ಯೆಗಳು ಬೆಳೆಯುತ್ತ ಹೋಗಿವೆ. ಲಕ್ಷಾಂತರ ಕೋಟಿವರೆಗೆ ಹಗರಣಗಳು ನಡೆದಿವೆ. ರಾಜ್ಯದ ಅಭಿವೃದ್ದಿಗೆ ಮೀಸಲಿಟ್ಟ ಹಣಕ್ಕಿಂತಲೂ ಹಗರಣದಲ್ಲಿ ಬೆಳಕಿಗೆ ಬಂದ ಹಣದ ಸಂಖ್ಯೆಯೇ ಹೆಚ್ಚು ಎಂದ ಅವರು, ತಮ್ಮ ಅಧಿಕಾರಾವಧಿಯಲ್ಲಿನ ಮಾನವೀಯ ಘಟನೆಗಳನ್ನು ಮೆಲಕು ಹಾಕುತ್ತ ಆಸ್ಪತ್ರೆಗಳಲ್ಲಿ ಯಾವ ರೀತಿಯ ಮಾನವೀಯ ಮೌಲ್ಯಗಳು ನಶಿಸುತ್ತಿವೆ. ವೈದ್ಯರಾದವರು ತಮ್ಮ ದುರಾಸೆಗಾಗಿ ಮಾನವೀಯತೆಯನ್ನೇ ಮರೆತು ಬಾಳುತ್ತಿರುವುದನ್ನು ಉದಾಹರಣೆ ಸಹಿತ ತಮ್ಮ ಅನುಭವಗಳನ್ನು ಬಿಚ್ಚಿಟ್ಟರು.

ರಾಜಕೀಯ ಪಕ್ಷಗಳು ಈ ದೇಶವನ್ನು ಅಭಿವೃದ್ಧಿಯಾಗಲು ಬಿಡುತ್ತಿಲ್ಲ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಇಂದು ಭ್ರಷ್ಟವಾಗಿವೆ. ಹಿಂದೆ ಜನರು ಶಾಸಕಾಂಗ, ಕಾರ್ಯಾಂಗದ ಮೇಲೆ ನಂಬಿಕೆ ಇಲ್ಲದಿದ್ದರೂ ನ್ಯಾಯಾಂಗದ ಮೇಲೆ ನಂಬಿಕೆಯಿಟ್ಟಿದ್ದರು. ಆದರೆ ಇಂದು ಆ ನಂಬಿಕೆಯು ಜನರಿಂದ ಮಾಯಾವಾಗಿದೆ. ಏಕೆಂದರೆ ನ್ಯಾಯಾವನ್ನು ಪಾಲಿಸುವ ನ್ಯಾಯಾಧೀಶರೆ ಭ್ರಷ್ಟರಾಗಿದ್ದಾರೆ. ಒಂದೊಂದು ಜಾಮಿನಿಗೆ ಕೋಟಿ ಕೋಟಿ ರೂ ಲಂಚ ಪಡೆಯುತ್ತಿರುವ ಉದಾಹರಣೆಗಳು ನನ್ನ ಮುಂದಿವೆ. ಇದನ್ನು ನಾನು ಹಲವು ವೇದಿಕೆಗಳಲ್ಲಿ ಹೇಳಿದ್ದೇನೆ. ಇಂತಹ ಸ್ಥಿತಿಯಲ್ಲಿ ನಮ್ಮ ದೇಶದ ಜನತೆ ಯಾರ ನಂಬಿಕೆಯಿರಿಸಬೇಕು ಎಂಬ ದ್ವಂದ್ವದಲ್ಲಿದ್ದಾರೆ ಎಂದರು.

ಭಟ್ಕಳ ಹೊನ್ನಾವರ ವಿಧಾನ ಸಭಾಕ್ಷೇತ್ರದ ಶಾಸಕ ಮಾಂಕಾಳು ಎಸ್ ವೈದ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪತ್ರಕರ್ತರು ಸಮಾಜದ ಕಣ್ಣು ಇದ್ದ ಹಾಗೆ, ಅವರ ಮಾರ್ಗದರ್ಶನ ಸಮಾಜಕ್ಕೆ ಅಗತ್ಯ. ರಾಜಕಾರಣಿಗಳು ಎಡವಿದಾಗ ಅವರನ್ನು ಎಚ್ಚರಿಸಿ ಸಮಾಜದ ಅಭಿವೃದ್ಧಿ ಸಹಕರಿಯಾಗಿದ್ದಾರೆ ಎಂದ ಅವರು ತನ್ನ ಅವಧಿಯಲ್ಲಿ ಶಿಕ್ಷಣ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆಯನ್ನು ನೀಡಿದ್ದೇನೆ ಎಂದರು.

ಮೊಹರೆ ಹಣಮಂತರಾಯ ಪ್ರಶಸ್ತಿ ಪುರಸ್ಕೃತ ಕರಾವಳಿ ಮುಂಜಾವು ಪತ್ರಿಕೆ ವ್ಯವಸ್ಥಾಪ ಸಂಪಾದ ಗಂಗಾಧರ್ ಹಿರೆಗುತ್ತಿ, ವಿಜಯಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಎಂ.ಆರ್.ನಾಯ್ಕ, ಹಿರಿಯ ಪತ್ರಕರ್ತ ವಿ.ಜಿ.ಭಟ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುಭ್ರಾಯ ಭಕ್ಕಳ ಈ ಸಂದರ್ಭದಲ್ಲಿ ಮಾತನಾಡಿದರು.

ನಾಗಯಕ್ಷೆ ಸಭಾಭವನದ ಧರ್ಮದರ್ಶಿ ರಾಮದಾಸ್ ಪ್ರಭು, ಹಿರಿಯ ಪತ್ರಿಕಾ ವಿತರಕ ಹನುಮಂತ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ರಾಧಕೃಷ್ಣ ಭಟ್ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಉಪಾಧ್ಯಕ್ಷ ಎಂ.ಆರ್.ಮಾನ್ವಿ ಪ್ರಸ್ತಾವಿಕವಾಗಿ ಮಾತನಾಡಿ ಸಂಘದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಕಾರ್ಯದರ್ಶಿ ಭಾಸ್ಕರ್ ನಾಯ್ಕ ವಂದಿಸಿದರು. ಪ್ರಸನ್ನ ಪ್ರಭು ನಿರೂಪಿಸಿದರು. ಈ ಸಂದರ್ಭದಲ್ಲಿ ಮೊಹರೆ ಹಣಮಂತರಾಯ ಪ್ರಶಸ್ತಿ ಪುರಸ್ಕೃತ ಗಂಗಾಧರ್ ಹಿರೆಗುತ್ತಿ, ಸಮಾಜ ಸೇವಕ ಎಂ.ಆರ್.ನಾಯ್ಕ, ಹಿರಿಯ ಪತ್ರಿಕಾ ವಿತರಕ ಹನುಮಂತ್ ಪ್ರಭುರನ್ನು ಸನ್ಮಾನಿಸಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News