ಬಡ ವಿದ್ಯಾಥಿರ್ಗಳಿಗೆ ಪ್ರೋತ್ಸಾಹ ನೀಡಿ: ಠಾಣಾಧಿಕಾರಿ ವೆಂಕಟರಮಣ

Update: 2017-07-08 13:38 GMT

ಮಡಿಕೇರಿ ಜು.8: ಬಡ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಜನೆಗೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕೆಂದು ಮಡಿಕೇರಿ ನಗರ ಪೊಲೀಸ್ ಠಾಣಾಧಿಕಾರಿ ವೆಂಕಟರಮಣ ತಿಳಿಸಿದ್ದಾರೆ.

ಮೈಸೂರು ರಸ್ತೆಯಲ್ಲಿರುವ ನಗರಸಭಾ ಶಾಲಾ ವಿದ್ಯಾರ್ಥಿಗಳಿಗೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಠಾಣಾಧಿಕಾರಿಗಳು, ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬದುಕನ್ನು ಕಲ್ಪಿಸುವುದು ಪುಣ್ಯದ ಕಾರ್ಯವೆಂದರು. ಬಡವರೆನ್ನುವ ಕೀಳಿರಿಮೆ ಇಟ್ಟುಕೊಳ್ಳದೆ ಸರಕಾರ ಮತ್ತು ವಿವಿಧ ಸಂಘ, ಸಂಸ್ಥೆಗಳು ನೀಡುವ ಸಹಕಾರವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೇರುವ ಪ್ರಯತ್ನ ಮಾಡಬೇಕೆಂದರು. ಬಡ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುವ ಮಹತ್ವದ ಕಾರ್ಯವನ್ನು ದಲಿತ ಸಂಘರ್ಷ ಸಮಿತಿ ಮಾಡುತ್ತಿದ್ದು, ಇದು ಇತರ ಸಂಘ, ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.

ದಾನಿಗಳಾದ ಟಿ.ಆರ್.ವಾಸುದೇವ್ ಮಾತನಾಡಿ, ಶಿಕ್ಷಣಕ್ಕೆ ಪೂರಕವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಘಟನೆಗಳಿಗೆ ಸಮಾಜ ಸೂಕ್ತ ಪ್ರೋತ್ಸಾಹವನ್ನು ನೀಡುವ ಅಗತ್ಯವಿದೆ ಎಂದರು. ದೇಶದ ಮುಂದಿನ ಪ್ರಜೆಗಳಾಗಿರುವ ವಿದ್ಯಾರ್ಥಿಗಳನ್ನು ಹಾಗೂ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕರುಗಳನ್ನು ಪ್ರತಿಯೊಬ್ಬರು ಗುರುತಿಸಬೇಕೆಂದು ತಿಳಿಸಿದರು.
 
ಅಧ್ಯಕ್ಷತೆ ವಹಿಸಿ ಮಾತನಾಡಿದ ದಸಂಸ ಯ ಜಿಲ್ಲಾ ಸಂಚಾಲಕರಾದ ಹೆಚ್.ಎಲ್.ದಿವಾಕರ್, ಕಳೆದ 30 ವರ್ಷಗಳಿಂದ ಸಂಘಟನೆಯು ಸಾಮಾಜಿಕ ಕಳಕಳಿಯ ಕಾರ್ಯವನ್ನು ಮಾಡುತ್ತಿದ್ದು, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ ಎಂದರು. ದುರ್ಬಲರು ಹಾಗೂ ಬಡವರು ಕೂಡ ಉನ್ನತ ಮಟ್ಟದಲ್ಲಿ ವ್ಯಾಸಾಂಗ ಮಾಡಬೇಕೆನ್ನುವುದು ನಮ್ಮ ಉದ್ದೇಶವಾಗಿದ್ದು, ಆ ನಿಟ್ಟಿನಲ್ಲಿ ಪ್ರೋತ್ಸಾಹವನ್ನು ನೀಡಲಾಗುತ್ತಿದೆ ಎಂದರು.

ಶಾಲಾ ಶಿಕ್ಷಕರುಗಳ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಸಂಘಟನಾ ಸಂಚಾಲಕ ದೀಪಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News