×
Ad

ಮಂಡ್ಯ ಜಿಲ್ಲೆಯಲ್ಲಿ ಡೆಂಗ್ ಉಲ್ಬಣ: ಯುವತಿ ಮೃತ್ಯು

Update: 2017-07-08 20:08 IST

ಮಂಡ್ಯ, ಜು.8: ಜಿಲ್ಲೆಯಲ್ಲಿ ಡೆಂಗ್ ಜ್ವರ ವ್ಯಾಪಕವಾಗಿ ಹರಡುತ್ತಿದ್ದು, ಹಲವು ಗ್ರಾಮಗಳಲ್ಲಿ ಜ್ವರದಿಂದ ನರಳುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ದೊಡ್ಡವರು ಸೇರಿದಂತೆ ಮಕ್ಕಳು ಕೀಲು ನೋವು, ವಿಪರೀತ ಜ್ವರ, ಸುಸ್ತಿನಿಂದ ಹಾಸಿಗೆಯಿಂದ ಏಳಲೂ ಆಗದೆ ನರಳುತ್ತಿದ್ದರೆ, ಮತ್ತೊಂದೆಡೆ ಆಸ್ಪತ್ರೆ, ಕ್ಲಿನಿಕ್‌ಗಳು ರೋಗಿಗಳಿಂದ ತುಂಬಿ ಹೋಗಿವೆ.

ಸಾವಿರಾರು ರೂ. ಖರ್ಚುಮಾಡಿ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ಹಲವರು ಸಾವನ್ನಪ್ಪುತ್ತಿದ್ದರೆ, ಇನ್ನೂ ಹಲವರಲ್ಲಿ ಯಾವುದೇ ಚೇತರಿಕೆ ಕಂಡುಬರದೇ ಇರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಯುವತಿ ಸಾವು: ತೀವ್ರ ಜ್ವರದಿಂದ ಬಳಲುತ್ತಿದ್ದ ಮಳವಳ್ಳಿ ತಾಲೂಕು ಗೌಡಗೆರೆಯ ಕೃಷ್ಣ ಅವರ ಪುತ್ರಿ ಸುಶ್ಮಿತಾ(19) ಮೈಸೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಮದ್ದೂರು ವರದಿ: ತಾಲೂಕಿನ ಮಾಲಗಾರನಹಳ್ಳಿ ಗ್ರಾಮದಲ್ಲಿ ಹಲವು ಮಂದಿ ಡೆಂಗ್ ಜ್ವರದಿಂದ ನರಳುತ್ತಿರುವುದು ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ. ಕಳೆದ ಕೆಲವು ದಿನಗಳ ಹಿಂದೆ ರಮೇಶ್ ಅವರ ಪುತ್ರ ಎಂ.ಆರ್.ರಮೇಶ್(23) ಸಾವನ್ನಪ್ಪಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ.

ಗ್ರಾಮದಲ್ಲಿ ಮಕ್ಕಳು ಸೇರಿದಂತೆ ಹಲವು ಮಂದಿ ಜ್ವರದ ತೀವ್ರತೆಯಿಂದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಇಷ್ಟಾದರೂ ವೈದ್ಯರಾಗಲೀ, ಯಾವುದೇ ಅಧಿಕಾರಿಗಳು ಗ್ರಾಮದ ಕಡೆ ಮುಖ ಮಾಡಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಗೊಲ್ಲರದೊಡ್ಡಿ, ಕೀಳಘಟ್ಟ, ಕುಂಟನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಜ್ವರದಿಂದ ಬಳಲುತ್ತಿರುವವ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಪಂಚಾಯತ್ ಜನಪ್ರತಿನಿಧಿಗಳು, ಅಧಿಕಾರಿಗಳು ಗ್ರಾಮಗಳ ಸ್ವಚ್ಛತೆ ಕಡೆಗೆ ಗಮನಹರಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News