ಗ್ರಾಮೀಣ ಜನರಿಗೆ ಸಾರಿಗೆ ವ್ಯವಸ್ಥೆ ಅಗತ್ಯ: ಕೆ.ಜಿ.ಬೋಪಯ್ಯ
ಮಡಿಕೇರಿ ಜು.9: ಗ್ರಾಮೀಣ ಜನರ ಶೈಕ್ಷಣಿಕ ಮತ್ತು ಸಾಮಾಜಿಕ ಬದುಕು ಹಸನಾಗಬೇಕಾದರೆ ಗ್ರಾಮ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸಾರಿಗೆ ವ್ಯವಸ್ಥೆ ಅಗತ್ಯವೆಂದು ಶಾಸಕರಾದ ಕೆ.ಜಿ.ಬೋಪಯ್ಯ ಅಭಿಪ್ರಾಯಪಟ್ಟಿದ್ದಾರೆ.ಹೆಸರುವಾಸಿ ಪ್ರವಾಸಿತಾಣ ಮಾಂದಲ್ ಪಟ್ಟಿ- ದೇವಸ್ತೂರು- ಮಡಿಕೇರಿ ಮಾರ್ಗ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಿ ಶಾಸಕರು ಮಾತನಾಡಿದರು.
ಗಾಳಿಬೀಡು ಗ್ರಾ.ಪಂ.ವ್ಯಾಪ್ತಿಯ ಕಾಲೂರು, ಮಾಂದಲ್‌ಪಟ್ಟಿ ಗ್ರಾಮಗಳು ಹಿಂದೆ ಕುಗ್ರಾಮವಾಗಿತ್ತು, ಈಗ ರಸ್ತೆ, ವಿದ್ಯುತ್ ಸಂಪರ್ಕ ಮತ್ತಿತರ ಮೂಲ ಸೌಲಭ್ಯ ಪಡೆದು ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಿವೆ. ಆ ದಿಸೆಯಲ್ಲಿ ನೂತನವಾಗಿ ಬಸ್ ಸಂಪರ್ಕವನ್ನು ಮಾಂದಲ್‌ಪಟ್ಟಿಗೆ ಕಲ್ಪಿಸಲಾಗಿದ್ದು, ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಪ್ರಯೋಜನವಾಗಲಿ ಎಂದು ಅವರು ಹೇಳಿದರು.
ಹಿಂದೆ ಬಸ್ ಸಂಪರ್ಕವಿಲ್ಲದೆ ತರಕಾರಿ ಹಾಗೂ ಆಹಾರ ಪದಾರ್ಥಗಳನ್ನು ನಡೆದೇ ಹೊತ್ತು ತರುತ್ತಿದ್ದರು, ಮಕ್ಕಳು ಶಾಲೆಗೆ ನಡೆದುಕೊಂಡು ಹೋಗಬೇಕಿತ್ತು, ಸುರಕ್ಷಿತ ರಸ್ತೆ ಹಾಗೂ ವಿದ್ಯುತ್ ಸಂಪರ್ಕವಿಲ್ಲದೆ, ಇಲ್ಲಿನ ನಾಗರಿಕರು ಮತ್ತು ಮಕ್ಕಳು ತುಂಬಾ ತೊಂದರೆ ಅನುಭವಿಸಿದ್ದಾರೆ ಎಂದು ತಮ್ಮ ಚಿಕ್ಕಂದಿನ ದಿನವನ್ನು ಕೆ.ಜಿ.ಬೋಪಯ್ಯ ಸ್ಮರಿಸಿದರು. ಮಾಂದಲ್ ಪಟ್ಟಿಯಿಂದ ಹಮ್ಮಿಯಾಲ 6 ಕಿ.ಮೀ ವರೆಗೂ ಬಸ್ ಸಂಪರ್ಕ ಕಲ್ಪಿಸಬೇಕಿದೆ. ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೆ.ಜಿ.ಬೋಪಯ್ಯ ತಿಳಿಸಿದರು.
ಜಿ.ಪಂ.ಸದಸ್ಯರಾದ ಯಲದಾಳು ಪದ್ಮಾವತಿ, ತಾ.ಪಂ.ಸದಸ್ಯರಾದ ಮುದ್ದಂಡ ರಾಯ್ ತಮ್ಮಯ್ಯ, ಗಾಳಿಬೀಡು ಗ್ರಾ.ಪಂ.ಅಧ್ಯಕ್ಷರಾದ ಸುಭಾಷ್ ಸೋಮಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಬಿ.ಎಸ್.ತಮ್ಮಯ್ಯ, ಎ.ಟಿ.ಮಾದಪ್ಪ, ಸಿ.ಎಂ.ತಿಮ್ಮಯ್ಯ, ಪುಷ್ಪ ಪೂಣಚ್ಚ, ಕನ್ನಂಡ ಪೆಮ್ಮಯ್ಯ, ಕಾಲೂರು ನಾಗೇಶ್ಹಾಗೂಗ್ರಾಮಸ್ಥರು ಹಾಜರಿದ್ದರು.