ಸಾಲಬಾಧೆ: ಇಬ್ಬರು ರೈತರು ಆತ್ಮಹತ್ಯೆ

Update: 2017-07-09 15:44 GMT

ಮಂಡ್ಯ, ಜು.9 : ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಮುಂದುವರಿದಿದ್ದು, ರವಿವಾರವೂ ಇಬ್ಬರು ರೈತರು ಸಾವಿಗೆ ಶರಣಾಗಿದ್ದಾರೆ.

ಮಂಡ್ಯ ತಾಲೂಕಿನ ದೊಡ್ಡಬಾಣಸವಾಡಿ ಗ್ರಾಮದ ದಿವಂಗತ ಪ್ಟುಟಸ್ವಾಮಿ ಮಗ ಸುನೀಲ್ ಬಾಬು ಹಾಗೂ ಮಳವಳ್ಳಿ ತಾಲೂಕು ಅಂಕನಹಳ್ಳಿಯ ಸುರೇಶ್‌ಕುಮಾರ್(36) ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಒಂದು ಎಕರೆ ಜಮೀನು ಹೊಂದಿದ್ದ ಸುನೀಲ್ಬಾಬು, ಅದರಲ್ಲಿ 20 ಗುಂಟೆ ಜಮೀನನ್ನು ವಾರಾಟ ಮಾಡಿ ಕೊರೆಸಿದ್ದ ಕೊಳವೆಬಾವಿ ವಿಫಲವಾಗಿತ್ತು. ಕೃಷಿ ಚಟುವಟಿಕೆಗೆ ಕೃಷಿ ಪತ್ತಿನ ಸಹಕಾರ ಸಂಘ ಸೇರಿದಂತೆ ಖಾಸಗಿಯಾಗಿ 3 ಲಕ್ಷ ರೂ.ವೆರೆಗೆ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಮಳೆ ಇಲ್ಲದೆ ಬೆಳೆ ಕೈಕೊಟ್ಟಿತ್ತು. ಈ ನಡುವೆ ಸಾಲಗಾರರ ಕಿರುಕುಳ ಹೆಚ್ಚಾದ ಕಾರಣ ವಾರದ ಹಿಂದೆ ಜಮೀನಿನ ಬಳಿ ವಿಷ ಸೇವಿಸಿ ಅಸ್ವಸ್ಥನಾಗಿದ್ದ, ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟರು.

ಮಳವಳ್ಳಿ ತಾಲೂಕಿನ ಅಂಕನಹಳ್ಳಿ ಗ್ರಾಮದ ಸುರೇಶ ಎಡೂವರೆ ಎಕರೆ ಜಮೀನು ಹೊಂದಿದ್ದು, ಕಬ್ಬು ಬೆಳೆಯಲು ಬೋರ್‌ವೆಲ್ ಕೊರೆಸಿದ್ದರು. ಆದರೆ, ಕೊಳವೆಬಾವಿಯಲ್ಲಿ ನೀರು ಬಂದಿರಲಿಲ್ಲ. ಇದರಿಂದ ಮತ್ತಷ್ಟು ಸಾಲ ಹೆಚ್ಚಾಯಿತು. ಸಾಲ ತೀರಿಸಲು ಸಾಧ್ಯವಾಗದೆ ರವಿವಾರ ಜಮೀನಿನ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News