ನಾನು ಸತ್ತಿದ್ದೇನೆ ಆದರೆ ಕನಸುಗಳು ನನ್ನನ್ನು ಜೀವಂತವಾಗಿರಿಸಿದೆ: ಅನೊವರ

Update: 2017-07-10 08:34 GMT

ನಾನೊಬ್ಬ ಸರಳ ಮನುಷ್ಯಳಾಗಿ ಬಾಳಬೇಕೆಂದು ಪ್ರತಿ ದಿನ ಕನಸು ಕಾಣುತ್ತಿದ್ದರೂ ಜೀವನದುದ್ದಕ್ಕೂ ನೀರಿಗಿಂತ ಹೆಚ್ಚಾಗಿ ಕಣ್ಣೀರನ್ನೇ ಕುಡಿದವಳು ನಾನು. ಕಣ್ಣೀರಿಲ್ಲದೇ ಇರುವ ಒಂದೇ ಒಂದು ದಿನವನ್ನು ನನಗೆ ಕರುಣಿಸುವಂತೆ ನಾನು ಬೇಡಿಕೊಂಡ ದಿನಗಳೂ ಇವೆ. ನನ್ನ ಆತ್ಮವನ್ನು ಜೀವಂತವಾಗಿರಿಸಲು ನಾನು ತೀವ್ರವಾಗಿ ಹೋರಾಡಿದ್ದೇನೆ, ನನಗೆ ಕಲಿಯಲು ತುಂಬಾ ಆಸೆ ಇತ್ತು ಆದರೆ ಹಣವಿರಲಿಲ್ಲ. ಬದಲಾಗಿ ನಾನು ನನ್ನ  ನಾಲ್ಕು ಮಂದಿ ಸಹೋದರ ಸಹೋದರಿಯರನ್ನು ಓದಿಸಿದೆ.

ಬಹಳ ಸಣ್ಣ ಪ್ರಾಯದಲ್ಲಿಯೇ ಕೆಲಸ ಮಾಡಲು ಆರಂಭಿಸಿದೆ. ನನ್ನ ಜೀವನದಲ್ಲಿ ಗೊಂಬೆಗಳೊಂದಿಗೆ ಆಡಲು ನನಗೆ ಸಮಯವೇ ಇರಲಿಲ್ಲ. ನನ್ನ ಚಪ್ಪಲಿಯಲ್ಲಿ ಅಸಂಖ್ಯಾತ ಗುಂಡುಸೂಜಿಗಳಿದ್ದವು ಹಾಗೂ ಲೋಹದ ಮೇಲೆ ನಡೆದಂತೆ ನನಗನಿಸುತ್ತಿತ್ತು. ಎಲ್ಲರಿಗೂ ಆಹಾರ ಒದಗಿಸಬೇಕಾಗಿದ್ದರಿಂದ ನನಗಾಗಿ ಹೊಸ ಚಪ್ಪಲಿ ಕೊಳ್ಳಲೂ ನನ್ನಲ್ಲಿ ಹಣವಿರಲಿಲ್ಲ. ನನ್ನ ಜೀವನದಲ್ಲಿ ನಾನು ಭೇಟಿ ಮಾಡಿದ ಎಲ್ಲರ ಸಂತೋಷಕ್ಕೂ ನಾನು ಕಾರಣಳಾಗಿದ್ದೆ. ಎಲ್ಲರಿಗೂ ಎಲ್ಲವನ್ನೂ ನೀಡಿದ ನನಗಾಗಿ ಏನನ್ನೂ ನೀಡಲಾಗಲಿಲ್ಲ.

ಜನರ ಬಾಳಿನಲ್ಲಿ ಸಂತಸ ತರುವುದು ನನಗೆ ಬೇಕಿತ್ತು ಹಾಗೂ ನನ್ನ  ಬಳಲಿ ಬೆಂಡಾದ ದೇಹ ಹಾಗೂ ಆಯಾಸಭರಿತ ಆತ್ಮವನ್ನು ನಾನು ಯಾರಿಗೂ  ತೋರಿಸಲೇ ಇಲ್ಲ. ನನ್ನ ತಂದೆ ತಮ್ಮ ಮರಣಶಯ್ಯೆಯಲ್ಲಿದ್ದಾಗ "ನಾನು ಅವರ  ಪುತ್ರಿಯಲ್ಲ" ಎಂದು ನನಗೆ ಹೇಳಿದರು. ಆ ಕ್ಷಣದಿಂದ ನನ್ನ ಕುಟುಂಬಕ್ಕೆ ನಾನು ಪರಕೀಯಳಾಗಿ ಬಿಟ್ಟೆ. ಅವರ ಜೀವನದಿಂದ ನನ್ನನ್ನು ಹೊರ ಹಾಕಿದ ಅವರು ನನಗೂ ಅವರಿಗೂ ಯಾವುದೇ ರಕ್ತ ಸಂಬಂಧವಿಲ್ಲವೆಂದು ಆಗಾಗ ನೆನಪಿಸುತ್ತಿದ್ದರು.  ರಕ್ತ ಸಂಬಂಧ ಇಲ್ಲದೇ ಇದ್ದರೂ  ತಮ್ಮ ಹೃದಯದಲ್ಲಿ ನನಗೊಂದು ಸ್ಥಾನ ನೀಡುವಂತೆ ನನ್ನ ಸಹೋದರ ಸಹೋದರಿಯರಲ್ಲಿ ಬೇಡಿಕೊಂಡು ಅಲ್ಲಿರುವುದು ಸರಿಯಲ್ಲವೆಂದುಕೊಂಡೆ.

ನನ್ನ ಗಂಡ ನನ್ನನ್ನು ತೊರೆಯಲು ನಿರ್ಧರಿಸಿದಾಗ ನನ್ನ ಮಗನನ್ನು ನನ್ನೊಂದಿಗಿರಿಸುತ್ತೇನೆ ಎಂದು ಬೇಡಿಕೊಂಡೆ. ನನ್ನ ಮಗ ದೊಡ್ಡವನಾಗುವ ತನಕ ನಾನು ನೋಡಿಕೊಳ್ಳಲು ಆತ ಅನುಮತಿಸಿದ. ನನ್ನ ಪುಟ್ಟ ಹುಡುಗನಿಗಾಗಿ ನಾನು ಹೋರಾಡಲು ನಿರ್ಧರಿಸಿದೆ. ನಾನು ಒಂದು ಸರಳ ಕನಸನ್ನು ಕಾಣುವುದನ್ನು ಮುಂದುವರಿಸಿದೆ. ಒಂದು ಸರಳ ದಿನಕ್ಕಾಗಿ, ಕಣ್ಣೀರಿಲ್ಲದ ದಿನಕ್ಕಾಗಿ ನನ್ನ ಹೃದಯದಲ್ಲಿ ದಣಿವಿರದ ದಿನಕ್ಕಾಗಿ ಯಾವುದೇ ಕಷ್ಟವಿಲ್ಲದೆ ನಿದ್ದೆ ಮಾಡುವ ದಿನಕ್ಕಾಗಿ ನಾನು ಕನಸು ಕಂಡೆ. ಆದರೆ ಆ ದಿನ ನನ್ನ ಜೀವನದಲ್ಲಿ ಬರಲೇ ಇಲ್ಲ. ನನ್ನ  ಮಗ ದೊಡ್ಡವನಾದಾಗ ತನ್ನ ತಂದೆ ನನ್ನನ್ನು ತ್ಯಜಿಸಲು ಕಾರಣವೇನೆಂದು ಕೇಳಿದ.

ನನ್ನ ತಪ್ಪನ್ನು ಹುಡುಕಲು ನಾನು ರಾತ್ರಿ ಹಗಲು ಪ್ರಯತ್ನಿಸಿದೆ. ನನ್ನ ತಂದೆ ಒಂದೇ ಒಂದು ದಿನ ನನ್ನೊಡನೆ ಪ್ರೀತಿಯಿಂದಿಲ್ಲದೇ ಇರಲು ಕಾರಣವೇನು?, ನನ್ನ ಸಹೋದರ ಸಹೋದರಿಯರು ನನ್ನನ್ನು ತಮ್ಮ ಹೃದಯದಿಂದ ಹೊರ ಹಾಕಲು ನಾನು ಮಾಡಿದ ತಪ್ಪೇನು?, ನಮ್ಮ ಮದುವೆಯಾಗಿ ಒಂದು ದಶಕದ ನಂತರ ನನ್ನ ಪತಿ ನನ್ನನ್ನು ತ್ಯಜಿಸಲು ನಾನು ಮಾಡಿದ ತಪ್ಪೇನು?, ತಪ್ಪು ನನ್ನ ಪ್ರೀತಿ, ನನ್ನ ಆತ್ಮ ಹಾಗೂ ನನ್ನ ಬದ್ಧತೆಯಲ್ಲಿತ್ತು. ನನ್ನ ಆತ್ಮ ಸತ್ತಿದೆ ಆದರೂ ನಾನು ಕನಸು ಕಾಣುತ್ತೇನೆ, ಶಾಂತಿಯುತ ಬೆಳಿಗ್ಗೆಯನ್ನು ಕಾಣುವ ಕನಸು ಕಾಣುತ್ತೇನೆ, ನೋವಿಲ್ಲದ ರಾತ್ರಿಯ ಕನಸು ಕಾಣುತ್ತೇನೆ. ನನ್ನನ್ನು  ನಾನು ಪ್ರೀತಿಯಿಂದ ಕಾಣುವ ಕನಸು ಕಾಣುತ್ತೇನೆ. ನಾನು ಸತ್ತಿದ್ದೇನೆ ಆದರೆ ಈ ಕನಸುಗಳು ನನ್ನನ್ನು ಜೀವಂತವಾಗಿರಿಸಿವೆ.

- ಅನೊವರ (70)

Full View

Writer - ಜಿ ಎಂ ಬಿ ಆಕಾಶ್

contributor

Editor - ಜಿ ಎಂ ಬಿ ಆಕಾಶ್

contributor

Similar News